ಕೋಲಾರ: ಇಡೋ ದೇಶದ ರೈತಾಪಿ ಸಮುದಾಯವನ್ನು ಕೊರೋನಾ ಇನ್ನಿಲ್ಲದಂತೆ ಕಾಡುತ್ತಿದೆ. ಅದರಲ್ಲೂ ಮಾವು ಬೆಳೆಯ ಕೊಯ್ಲಿನ ಋತುವಿನಲ್ಲಿ ಕೊರೋನಾ ವಕ್ಕರಿಸಿರುವುದರಿಂದ ಮಾವು ಬೆಳೆಗಾರರು ಬಹುತೇಕ ಬೀದಿಗೆ ಬಿದ್ದಂತಾಗಿದೆ. ಅಪಾರ ಪ್ರಮಾಣದಲ್ಲಿ ಮಾವು ಮಾರಾಟವಾಗುತ್ತಿದ್ದ ಕೋಲಾರದ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ವೇಳೆ ಕೊರೊನಾ ಸೋಂಕು ಕಂಡು ಬಂದರೆ ಮುಂದೆ ಗತಿಯೇನು ಎಂಬುದು ಇಲ್ಲಿನ ರೈತರ ಆತಂಕ.
ಜಿಲ್ಲೆಯಾದ್ಯಂತ ಮಾವು ಬೆಳೆಯ ಕೊಯ್ಲು ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಕೆಲವೇ ಮಧ್ಯವರ್ತಿಗಳು ಹಾಗೂ ಮಂಡಿಗಳು ಮಾತ್ರ ವ್ಯವಹಾರ ಪ್ರಾರಂಬಿಸಿವೆ. ದೇಶ ವಿದೇಶಗಳಿಂದ ಬರುತ್ತಿದ್ದ ಮಾವಿನ ವ್ಯಾಪಾರಿಗಳು ಈ ಬಾರಿ ಈ ಕಡೆಗೆ ತಲೆಯೂ ಹಾಕಿಲ್ಲ. ಆದರೆ ರೈತರು ಈಗಾಗಲೇ ಮಾರುಕಟ್ಟೆಗೆ ಮಾವು ತರಲು ಪ್ರಾರಂಭ ಮಾಡಿದ್ದಾರೆ. ವಿಶೇಷ ತಳಿಗಳಾದ ರಾಜಗೀರ, ಬಾದಾಮಿ ಮುಂತಾದವು ಈಗಾಗಲೇ ಹಣ್ಣಾಗಲು ಸಿದ್ದವಾಗಿವೆ.
ಆದರೆ ಮುಂದೆ ಕೊರೊನಾ ಮತ್ತಷ್ಟು ಕಾಡುವ ಭೀತಿಯಿಂದ ಬೆಳೆಗಾರರು ತೋತಾಪುರಿ ಮಾವನ್ನೂ ಈಗಲೇ ಕಟಾವು ಮಾಡಿ ಮಾರುಕಟ್ಟೆಗೆ ತರಲು ಪ್ರಾರಂಬಿಸಿದ್ದಾರೆ. ಜೂನ್ – ಜುಲೈ ತಿಂಗಳಿನಲ್ಲಿ ಕೊಯ್ಲಿಗೆ ಒಳಗಾಗಬೇಕಾದ ಮಾವು ಈಗಲೇ ಮಾರುಕಟ್ಟೆಗೆ ಬರುತ್ತಿದೆ. ಮಾವಿನ ಪಲ್ಪ್ ಗೆ ಬಳಸುವ ತೋತಾಪುರಿಯನ್ನು ಈಗ ಕಟಾವು ಮಾಡುವುದರಿಂದ ಶೇ 40ರಷ್ಟು ನಷ್ಟವಾಗಲಿದೆ. ಈಗಾಗಲೇ ಬೆಳೆ ಬಂದಿರಿವುದು ಕೇವಲ 30% ರಷ್ಟು ಮಾತ್ರ.
ಇನ್ನೂ ಕೊಯ್ಲಿಗೆ ಬರದ ಮಾವನ್ನು ಈಗಲೇ ಮಾರುಕಟ್ಟೆಗೆ ತಂದಲ್ಲಿ ರೈತರು ಮತ್ತಷ್ಟು ನಷ್ಟ ಹೊಂದಲಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನು ತಿನ್ನಲು ಪಕ್ವವಲ್ಲದ ಮಾವು ಈಗಾಗಲೇ ಮಾರುಕಟ್ಟೆಗೆ ಬರುತ್ತಿದ್ದು, ರಸಾಯನಿಕ ಬಳಿಸಿ ಹಣ್ಣು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ದೊರಕುತ್ತಿರುವ ರೀತಿಯ ಮಾವಿನ ಹಣ್ಣಗಳನ್ನು ಸೇವಿಸಿದ್ದಲ್ಲಿ ಆರೋಗ್ಯ ಕೆಡುವುದು ಸಹ ನಿಜ ಎಂಬುದನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಅದಲ್ಲದೆ ಈಗಾಗಲೇ ಪಕ್ವವಲ್ಲದ ಪಸಲು ಮಾರುಕಟ್ಟೆಗೆ ಬರುತ್ತಿರುವುದರಿಂದ ವ್ಯಾಪಾರಿಗಳು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ವಿಧಿ ಇಲ್ಲದೆ ರೈತರು ಸಹ ಬಂದಷ್ಟು ಬೆಲೆಗೆ ಕೊಟ್ಟು ಹೋಗುತ್ತಿದ್ದಾರೆ. ಬಾಂಗ್ಲಾದೇಶ, ಮಯನ್ಮಾರ್, ಅರಬ್ ಸರಿದಂತೆ ಹಲವು ವಿದೇಶಗಳಿಗೆ ಮಾವು ಇಲ್ಲಿಂದಲೇ ಸರಬರಾಜು ಆಗುತ್ತಿತ್ತು.
ಆದರೆ ಕೊರೋನಾ ಹಾವಳಿಗೆ ಇಡೀ ಪ್ರಪಂಚವೇ ನಲುಗಿ ಹೋಗಿದ್ದು ಅದರಲ್ಲಿ ಮಾವು ಬೆಳೆಗಾರರು ಸಹ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಬದುಕುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಇದೇ ಮೊದಲ ಬಾರಿಗೆ ಆನ್ಲೈನ್ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೋಮಚ ಸಮಾಧಾನಕರ ವಿಚಾರ ಅಂದರೆ ಆನ್ಲೈನ್ ಮಾರುಕಟ್ಟೆಯಲ್ಲಿ ವಹಿವಾಟು ಕೊಂಚ ಸುದಾರಿಸಿದೆ. ಇನ್ನೂ ಜಿಲ್ಲೆಯಾದ್ಯಂತ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದೆ. ಅದರಲ್ಲಿ ಬಹುತೇಕ ಶ್ರೀನಿವಾಸಪುರ ತಾಲ್ಲೂಕಿನದ್ದಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆದ ಪಸಲೂ ಸಹ ಶ್ರೀನಿವಾಸಪುರ ಮಾರುಕಟ್ಟೆಗೆ ಬರುತ್ತಿದೆ. ಏನೇ ಆದರೂ ಈ ಸಮಯದಲ್ಲಿ ಸರ್ಕಾರ ಮಾವು ಬೆಳೆಗಾರರ ನೆರವಿಗೆ ಬಂದಲ್ಲಿ ಮುಂದಿನ ವರ್ಷ ಮಾವಿನ ಬೆಳೆಯ ಮೇಲೆ ಕೊಂಚ ನಂಬಿಕೆಯಾದರೂ ಉಳಿಯುತ್ತದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.