ಶಿವಮೊಗ್ಗ: ಪ್ರತಿ ದಿನ ಸ್ಮಶಾನದೊಳಗೆ ಪಾರ್ಟಿ ಮಾಡುತ್ತಿದ್ದ ಗೆಳೆಯರಿಬ್ಬರ ಮಧ್ಯೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ(Shivamogga)ದ ಸಾಗರ ರಸ್ತೆಯ ಆಯನೂರು ಗೇಟ್ ಹತ್ತಿರ ಇರುವ ಸ್ಮಶಾನದಲ್ಲಿ ಈ ಘಟನೆ ನಡೆದಿದೆ. ರಾಜು ನಾಯ್ಕ್ (30) ಸಾವನ್ನಪ್ಪಿದ ದುರ್ದೈವಿ. ರಾಜು ಮತ್ತು ವಿಕ್ರಮ್ ಸ್ನೇಹಿತರಿಬ್ಬರು ಒಟ್ಟಿಗೆ ಕುಳಿತು ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಇಬ್ಬರ ಮಧ್ಯೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿದೆ.
ರಾಜು ನಾಯ್ಕ್ ಹತ್ತಿರ 1800 ರೂ. ಹಣವನ್ನು ಸಾಲವಾಗಿ ವಿಕ್ರಮ್ ಎಂಬಾತ ಪಡೆದುಕೊಂಡಿದ್ದ. ಕಳೆದ 15 ದಿನಗಳ ಹಿಂದೆ ರಾಜು ನಾಯ್ಕ್ ತಂದೆ ತೀರಿ ಹೋಗಿದ್ದರು. ಇಬ್ಬರು ಪೇಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಂಜೆ ಆಗುತ್ತಿದ್ದಂತೆ ಇಬ್ಬರೂ ಸಮೀಪದ ಸ್ಮಶಾನದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಎಂದಿನಂತೆ ಮಂಗಳವಾರ ಕೂಡ ಪಾರ್ಟಿ ಮಾಡಿದ್ದಾರೆ.
ಈ ವೇಳೆ ರಾಜು ನಾಯ್ಕ್ ಕೊಟ್ಟಿರುವ ಸಾಲ ಮರಳಿ ಕೊಡುವಂತೆ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಇದರಿಂದ ಕುಪಿತಗೊಂಡ ವಿಕ್ರಮ್ ತನ್ನ ಬಳಿ ಇದ್ದ ಚಾಕುವಿನಿಂದ ಸ್ನೇಹಿತ ರಾಜುಗೆ ಹಾಕಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ರಾಜು ಸಾವನ್ನಪ್ಪಿದ್ದಾನೆ.
ಕೊಲೆ ಮಾಡಿದ ನಂತರವೂ ವಿಕ್ರಮ್ ಅಲ್ಲಿಯೇ ಕುಳಿತಿದ್ದಾನೆ. ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.