2024ರ ಅಂಡರ್-19 ವಿಶ್ವಕಪ್ ನಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ತನ್ನ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತವು 201 ರನ್ ಗಳ ಅಂತರದಲ್ಲಿ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು, ಮುಶೀರ್ ಖಾನ್ ಶತಕ ಹಾಗೂ ನಾಯಕ ಉದಯ್ ಸಹಾರನ್ ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 301 ರನ್ ಗಳನ್ನು ಗಳಿಸಿತ್ತು. ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡವು 100 ರನ್ಗಳಿಗೆ ಆಲೌಟ್ ಆಗುವ ಮೂಲಕ ದೊಡ್ಡ ಅಂತರದ ಸೋಲು ಕಂಡಿದೆ.
ಭಾರತ ತಂಡಕ್ಕೆ ಕೂಡ ಉತ್ತಮ ಆರಂಭ ಸಿಕ್ಕಿರಲಿಲ್ಲ. ಆರಂಭಿಕ ಆದರ್ಶ್ ಸಿಂಗ್ 17 ರನ್ ಗಳಿಸಿ ಔಟ್ ಆಗಿದ್ದರು. ಅರ್ಶಿನ್ ಕುಲಕರ್ಣಿ 32 ರನ್ ಗಳಿಸಿದ್ದರು. ನಾಯಕ ಉದಯ್ ಸಹರಾನ್ ಹಾಗೂ ಮುಶೀರ್ ತಂಡದ ಇನ್ನಿಂಗ್ಸ್ ಕಟ್ಟಿದರು. 66 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮುಶೀರ್ ಮುಂದಿನ 34 ಎಸೆತಗಳಲ್ಲಿ ಶತಕ ಪೂರೈಸಿದರು. ನಾಯಕ ಉದಯ್ ಸಹರನ್ (84 ಎಸೆತಗಳಲ್ಲಿ 75 ರನ್) ಅವರೊಂದಿಗೆ 156 ರನ್ಗಳ ಜೊತೆಯಾಟ ನೀಡಿದರು.
ಸಚಿನ್ ದಾಸ್ ಒಂಬತ್ತು ಎಸೆತಗಳಲ್ಲಿ 21 ರನ್ ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಕೊನೆಯ 10 ಓವರ್ಗಳಲ್ಲಿ ಭಾರತ 119 ರನ್ ಗಳಿಸಿತ್ತು. ಭಾರತೀಯ ಬೌಲರ್ ಗಳು ಕೂಡ ಭರ್ಜರಿಯಾಗಿ ಮಿಂಚಿದರು.