ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯು ಉದ್ಯೋಗದಲ್ಲಿರುವ ಹಿಂದೂಯೇತರರು ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕು (VRS) ಅಥವಾ ಆಂಧ್ರಪ್ರದೇಶದ ಇನ್ನಿತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಗೆ ಆರಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಕೈಗೊಂಡಿದೆ.
ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು (BR Naidu) ಅವರು ಸೋಮವಾರ ಈ ಕುರಿತು ನಿರ್ಣಯ ಹೊರಡಿಸಿದ್ದಾರೆ. ಹಿಂದೂಯೇತರ ಉದ್ಯೋಗಿಗಳ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಮಂಡಳಿಯ 7 ಸಾವಿರ ಖಾಯಂ ಉದ್ಯೋಗಿಗಳ ಪೈಕಿ ಸುಮಾರು 300 ಜನರಿಗೆ ಈ ಕ್ರಮವು ಪರಿಣಾಮ ಬೀರಲಿದೆ ಎಂದು ಮೂಲಗಳು ಹೇಳಿವೆ. ಅಲ್ಲದೇ, ಟಿಟಿಡಿಯು ಸುಮಾರು 14,000 ಗುತ್ತಿಗೆ ಕಾರ್ಮಿಕರನ್ನು ಸಹ ನೇಮಿಸಿಕೊಂಡಿದೆ.
ಅಕ್ಟೋಬರ್ 31 ರಂದು ಟಿಟಿಡಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಾಯ್ಡು ಅವರು ದೇವಸ್ಥಾನವನ್ನು ಹಿಂದೂಗಳು ಮಾತ್ರ ನಡೆಸಬೇಕು ಎಂದು ತಮ್ಮ ನಿಲುವು ವ್ಯಕ್ತಪಡಿಸಿದ್ದರು. ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡಲು ಹಿಂದೂಯೇತರರನ್ನು ನೇಮಿಸಿಕೊಳ್ಳಬಾರದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ ಎಂದು ಹೇಳಿದ್ದಾರೆ.
ಹಲವು ವರ್ಷಗಳಿಂದ, ದೇವಸ್ಥಾನ ಮಂಡಳಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂದು ಟಿಟಿಡಿ ಕಾಯ್ದೆಯನ್ನು ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ ಎನ್ನಲಾಗಿದೆ.








