ಬೆಂಗಳೂರು : ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇಂದು ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿದರು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದೆ. ಹೀಗಾಗಿ ಇಂತಹ ಆರೋಪ ಮಾಡುತ್ತ ರಾಜಕಾರಣ ಮಾಡುತ್ತಿದ್ದಾರೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಏನು ಮಾಡಬೇಕು, ಏನು ಬಿಡಬೇಕು ಎಂಬುದು ಗೊತ್ತಾಗುತ್ತಿಲ್ಲ. ನಾಯಕತ್ವದ ಪೈಪೋಟಿಗಾಗಿ ಇಂತಹ ಆರೋಪ ಮಾಡುತ್ತಿದ್ದಾರೆ. ಇವರು ದಾಖಲೆ ಬಿಡುಗಡೆ ಮಾಡುವುದು ಹೊಸದೇನಲ್ಲ. ಯಾವ ದಾಖಲೆ ಸರಿ ಇದೆ ಅಂತ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಪ್ರತಿಪಕ್ಷದ ನಾಯಕರಾದ ಮೇಲೆ ಅವರಿಗೆ ಕೈ ಕಾಲು ಆಡುತ್ತಿಲ್ಲ. ಕೊರೊನಾ ಸಮಸ್ಯೆ ಇರುವಾಗ ಸರ್ಕಾರದ ಜೊತೆ ಕೈ ಜೋಡಿಸಬೇಕು. ಅದು ಬಿಟ್ಟು ಸುಮ್ಮನೆ ರಾಜಕಾರಣ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದೆ. ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಕುಟುಕಿದರು.
ಇದೇ ವೇಳೆ ಮೊದಲು ಕೊರೊನಾ ಓಡಿಸೋಣ, ಆ ಮೇಲೆ ರಾಜಕಾರಣ ಮಾಡೋಣ ಎಂದ ಈಶ್ವರಪ್ಪ, ಜನ ಸಾಯುತ್ತಿರುವಾಗ ಒಟ್ಟಿಗೆ ಕೆಲಸ ಮಾಡಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸರ್ಕಾರದ ಜೊತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.








