ನವದೆಹಲಿ: ನಾಳೆ ರಾತ್ರಿ 9ಗಂಟೆಗೆ 9ನಿಮಿಷ ಎಲ್ಲರೂ ಮನೆಯ ಲೈಟ್ ಆಫ್ ಮಾಡಿ, ದೀಪ ಅಥವಾ ಮೊಂಬತ್ತಿಗಳನ್ನು ಹಚ್ಚಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದಕ್ಕೆ ಅನೇಕರು ವ್ಯಂಗ್ಯಭರಿತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಕೆಲವರು ತಮ್ಮದೇ ಆದ ರೀತಿಯಲ್ಲಿ ವಿಚಿತ್ರವಾಗಿ ವಿಶ್ಲೇಷಣೆ ಮಾಡಿ ಜ್ಯೋತಿಷ್ಯ, ವೈಜ್ಞಾನಿಕ ಸಿದ್ಧಾಂತಗಳನ್ನೆಲ್ಲ ಅದಕ್ಕೆ ಜೋಡಿಸುತ್ತಿದ್ದಾರೆ. “ಎಲ್ಲರೂ ಒಗ್ಗಟ್ಟಾಗಿ ಮೊಂಬತ್ತಿ, ದೀಪಗಳನ್ನು ಉರಿಸುವುದರಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ ಕೊರೊನಾ ವೈರಸ್ ಸಾಯುತ್ತವೆ ಎಂದು ಬಿಜೆಪಿ ನಾಯಕರೇ ಪ್ರತಿಪಾದಿಸುತ್ತಿದ್ದಾರೆ.
ಆದ್ರೆ ಪ್ರಧಾನಿ ಮೋದಿಯವರು ದೀಪ ಹಚ್ಚಲು ಹೇಳಿದ್ದರ ಹಿಂದೆ ಯಾವುದೇ ವೈಜ್ಞಾನಿಕ, ಜ್ಯೋತಿಷ್ಯ ಅಥವಾ ಸಂಖ್ಯಾಶಾಸ್ತ್ರದ ಕಾರಣವಿಲ್ಲ ಕೇಂದ್ರ ಸರ್ಕಾರದ ಮಾಧ್ಯಮ ಸಂಸ್ಥೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಿಐಬಿ, ಯಾವುದೇ ರೂಮರ್ ಗಳನ್ನೂ ನಂಬಬೇಡಿ. ಕೊರೊನಾ ಒಂದು ಅಂಧಕಾರದಂತೆ ವಕ್ಕರಿಸಿದೆ. ಅದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ, ಏಕತೆಯಿಂದ ಹೋರಾಡಬೇಕು. ತನ್ಮೂಲಕ ಅದನ್ನು ಹೊಡೆದೋಡಿಸಬೇಕು ಎಂಬ ಸಂದೇಶ ಸಾರುವ ಸಲುವಾಗಿ ಪ್ರಧಾನಿ ಮೋದಿಯವರು ಏ.5ರಂದು ನಿಮ್ಮ ಮನೆಯ ವಿದ್ಯುತ್ ಬೆಳಕನ್ನು ಆರಿಸಿ ದೀಪ, ಮೊಂಬತ್ತಿ ಹಚ್ಚಿ, ಇಲ್ಲವೇ ಮೊಬೈಲ್ ನ ಫ್ಲ್ಯಾಶ್ ಲೈಟ್, ಟಾರ್ಚ್ ಆನ್ ಮಾಡಲು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದೆ.








