ಹೈಕಮಾಂಡ್ – ʻಕೈʼ ಗೂ ʻಕಮಲʼ ಕ್ಕೂ ವ್ಯತ್ಯಾಸ ಇಲ್ಲ..!
ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲೋ ಗುಲಾಮಗಿರಿ ಪದ್ದತಿಯಿಂದ ಅದ್ಯಾವಾಗ ಕರ್ನಾಟಕಕ್ಕೆ ಮುಕ್ತಿ ಸಿಗುತ್ತೋ..? ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚುನಾವಣೆಗೆ ಟಿಕೆಟ್ ಪಡೆಯಲು, ಮುಖ್ಯಮಂತ್ರಿ ಆಯ್ಕೆ, ಕ್ಯಾಬಿನೆಟ್ ರಚನೆ ಹೀಗೆ ಏನೇ ಆಗಬೇಕಾದ್ರೂ ಎಲ್ಲವೂ ನಿರ್ಧಾರ ಆಗ್ತಾ ಇದ್ದದ್ದು ದೆಹಲಿಯಲ್ಲಿ. ಹೈಕಮಾಂಡ್ ನಾಯಕರ ಮನವೊಲಿಸಿಕೊಂಡ್ರೆ ಏನು ಬೇಕಾದ್ರೂ ಮಾಡಬಹುದು. ಎದುರುಹಾಕಿಕೊಂಡ್ರೆ ಪದಚ್ಯುತಿ ಗ್ಯಾರಂಟಿ ಅನ್ನೋ ಸ್ಥಿತಿ ಇತ್ತು.
ಮತ್ತೊಂದು ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಕ್ಷ ಶಿಸ್ತಿಗೆ ಹೆಸರಾದದ್ದು. ಬಿಜೆಪಿ ಕಾಂಗ್ರೆಸ್ ಗಿಂತ ಭಿನ್ನವಾದ ಪಕ್ಷ ಎಂಬಂತೆ ಬಿಂಬಿಸಿಕೊಂಡಿತ್ತು. ಆದರೆ ಅಧಿಕಾರದ ವಿಚಾರ ಬಂದಾಗ ಬಿಜೆಪಿ ತಾನು ಕಾಂಗ್ರೆಸ್ ಗಿಂತ ಭಿನ್ನವಲ್ಲ ಅನ್ನೋದನ್ನು ಸಾಧಿಸಲು ಹೊರಟಿದೆ. ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕಾರಣವನ್ನ ಗಮನಿಸಿದವರಿಗೆ ಇದು ಸ್ಪಷ್ಟವಾಗಿ ಗೋಚರಿಸಿರುತ್ತದೆ. 2008 ರಲ್ಲಿ ಅಧಿಕಾರಕ್ಕೆ ಬಂದಾಗ 5 ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾದಾಗಲೇ ಬಿಜೆಪಿ ಕಾಂಗ್ರೆಸ್‌ಗಿಂತ ಭಿನ್ನವಲ್ಲ ಅಂತ ನಿರೂಪಿಸಿತ್ತು. 2 ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಅವಕಾಶ ಸಿಕ್ಕಾಗ ತನ್ನದೇ ನಿಯಮ(75 ವರ್ಷ ಮೀರಿದವರಿಗೆ ನಿವೃತ್ತಿ)ವನ್ನು ಮೀರಿ ಬಿ.ಎಸ್.ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟು ಪೂರ್ಣಾವಧಿ ಮುಗಿಸುವ ಭರವಸೆ ನೀಡಿತ್ತು.
ಆದರೆ ಬಿಎಸ್‌ವೈ ಗೆ ವಯಸ್ಸಾಗಿದೆ ಅನ್ನೋ ಕಾರಣ ಕೊಟ್ಟು ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿತು ಹೈಕಮಾಂಡ್. ಯಾವಾಗ ಸಿಎಂ ಬದಲಾವಣೆ ನಿರ್ಧಾರವಾಯ್ತೋ ಆಗಲೇ ಮುಂದಿನ ಸಿಎಂ ಯಾರಾಗಬೇಕು ಅನ್ನೋದು ಮುಂಚೆಯೇ ನಿರ್ಧಾರ ಮಾಡಿರಲಿಲ್ಲವೇ ಹೈಕಮಾಂಡ್. ಮುಖ್ಯಮಂತ್ರಿ ರಾಜೀನಾಮೆ ಕೊಟ್ಟ ಮೇಲೆ ಸಾಕಷ್ಟು ಹೈಡ್ರಾಮಾ ನಡೆಯಲು ಹೈಕಮಾಂಡ್ ಅವಕಾಶ ಕೊಟ್ಟ ಪರಿಣಾಮ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಎಸ್‌ವೈ ಸ್ಥಳೀಯ ಹೈಕಮಾಂಡ್ ಆಗಿ ರೂಪಗೊಳ್ಳುವಂತೆ ಮಾಡಿತು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ಮೇಲೆ ಅವರಿಗಿರೋದು ಕೇವಲ ಒಂದೂವರೆ ವರ್ಷದ ಅವಧಿ. ಆದರೆ ಅವರು ಸಿಎಂ ಆದ ಒಂದು ವಾರದ ನಂತರವೂ ತಮ್ಮ ಸಂಪುಟ ರಚನೆ ಮಾಡಲು ಎರಡೆರಡು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಮಾತನಾಡಲು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತಮ್ಮದೇ ಪಕ್ಷದ ಸಿಎಂ ಕ್ಯಾಬಿನೆಟ್ ರಚಿಸಲು ದೆಹಲಿಯಲ್ಲಿ ಹೈಕಮಾಂಡ್ ಅಪ್ಪಣೆಗಾಗಿ ಕಾಯುವಂತಾಗಿದೆ. ಕ್ಯಾಬಿನೆಟ್ ರಚನೆ ಅಷ್ಟು ಸುಲಭವಲ್ಲ ನಿಜ. ಅದರಲ್ಲೂ ಈಗಿನ ಸರ್ಕಾರದಲ್ಲಿ ಮೂಲ ಶಾಸಕರು, ವಲಸಿಗ ಶಾಸಕರು, ಹಿರಿಯರು. ಕಿರಿಯರು, ಆರ್‌ಎಸ್‌ಎಸ್ ಕಡೆಯವರು, ಬಿಎಸ್‌ವೈ ಕಡೆಯವರು, ಪ್ರಾದೇಶಿಕ ಸಮಾನತೆ, ಸಾಮಾಜಿಕ ನ್ಯಾಯ ಹೀಗೆ ಹಲವಾರು ಚಾಲೆಂಜಸ್ ಇದೆ. ಇದರ ಜೊತೆಗೆ ಮುಂದಿನ ಚುನಾವಣೆಗೆ ತಯಾರಿ ಆಗಬೇಕಾಗುತ್ತೆ ಅದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತೆ. ಎಲ್ಲರನ್ನೂ ಸಮಾಧಾನ ಪಡಿಸೋದು ಕಷ್ಟ. ಏನೇ ಸರ್ಕಸ್ ಮಾಡಿ ಲೆಕ್ಕಾಚಾರ ಹಾಕಿದ ಮೇಲೂ ಹಲವರಿಗೆ ಅಸಮಧಾನ ಆಗೋದು ನಿಶ್ಚಿತ.
ಇಂದು ಕರ್ನಾಟಕದಲ್ಲಿ ಒಂದು ಕಡೆ ನೆರೆ, ಮತ್ತೊಂದು ಕಡೆ ಕೋವಿಡ್ ಹಾವಳಿ ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆ, ಕ್ಯಾಬಿನೆಟ್ ರಚನೆಗಾಗಿ ಹೊಸ ಸಿಎಂ ದೆಹಲಿಗೆ ಅಲೆಯಬೇಕಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರವೇ ಅಸ್ತಿತ್ವದಲ್ಲಿ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಸಂದರ್ಭದಲ್ಲಿ ಹೈಕಮಾಂಡ್ ನಾಯಕರಿಗೆ ಜನರ ಸಮಸ್ಯೆಗಳಿಗಿಂತ ತಮ್ಮ ಭವಿಷ್ಯದ ಲಾಭವೇ ಮುಖ್ಯವಾದಂತಿದೆ. ಇದೆಲ್ಲಾ ಗಮನಿಸಿದ್ರೆ ಕೈ ಹೈಕಮಾಂಡ್ ಹೇಗೆ ವರ್ತಿಸ್ತಾ ಇತ್ತೋ ಅದೇ ರೀತಿ ಬಿಜೆಪಿ ಹೈಕಮಾಂಡ್ ಸಹ ವರ್ತಿಸುತ್ತಿದೆ. ಹೀಗಾಗಿ ಕೈ ಕಮಾಂಡ್‌ಗೂ ಕಮಲ ಕಮಾಂಡ್‌ಗೂ ಯಾವುದೇ ವ್ಯತ್ಯಾಸವಿಲ್ಲದಂತಾಗಿದೆ. ಒಟ್ಟಿನಲ್ಲಿ ಯಾರೇ ಅಧಿಕಾರಕ್ಕೆ ಬಂದ್ರೂ ದೆಹಲಿಯಲ್ಲಿ ಕೈ ಕಟ್ಟಿ ನಿಲ್ಲೋದು ಮಾತ್ರ ತಪ್ಪಲಿಲ್ಲ ಎನ್ನುವಂತಾಗಿದೆ.
#bjp #highcommand #congress #highcommand