ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಆದರೂ ಸಹ ಯಾವುದೇ ರೀತಿ ತೊಂದರೆ ಆಗದೆ ಎಸ್.ಎಸ್.ಎಲ್ ಸಿ ಪರೀಕ್ಷೆ ನಡೆಯುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಇಂದು ಎಸ್.ಎಸ್.ಎಲ್ ಸಿ ಪರೀಕ್ಷೆ ಇರುವ ಕಾರಣಕ್ಕೆ ಸುರೇಶ್ ಕುಮಾರ್ ನಗರದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು ವಾಸ್ತವ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ ಪರೀಕ್ಷೆ ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿದೆ. ಕೆಲ ಕಡೆ ಬಸ್ ಸಮಸ್ಯೆ ಆಗಿದೆ. ಒಂದು ವೇಳೆ ಬಸ್ ವಿಚಾರದಲ್ಲಿ ವಿದ್ಯಾರ್ಥಿಗೆ ಪರೀಕ್ಷೆ ಮಿಸ್ ಆದರೆ ಇನ್ನೊಂದು ಬಾರಿ ಬರೆಯಲು ಅವಕಾಶವಿದೆ.
ರಾಜ್ಯದಲ್ಲಿ ಲಾಕ್ ಡೌನ್ ಮಾಡಲು ಇನ್ನೂ ತೀರ್ಮಾನ ಮಾಡಿಲ್ಲ. ಒಂದು ವೇಳೆ ಲಾಕ್ ಡೌನ್ ಆದರೂ ಸಹ ಎಸ್.ಎಸ್.ಎಲ್ ಸಿ ಪರೀಕ್ಷೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.