ಮೈದಾನದಲ್ಲಿ ಪ್ರೇಕ್ಷಕರಿಲ್ಲದೆ ಟಿ-ಟ್ವೆಂಟಿ ವಿಶ್ವಕಪ್ ಆಡಿಸೋದು ಸರಿ ಅನ್ನಿಸುತ್ತಿಲ್ಲ – ವಾಸೀಮ್ ಅಕ್ರಮ್
ಕೊರೋನಾ ವೈರಸ್ ನಿಂದಾಗಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಭವಿಷ್ಯ ತೂಗೂಯ್ಯಾಲೆಯಲ್ಲಿದೆ. ಮೊನ್ನೆ ಮೊನ್ನೆಯಷ್ಟೇ ಐಸಿಸಿ ಈ ಬಗ್ಗೆ ಸಭೆ ನಡೆಸಿತ್ತು. ಆದ್ರೆ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿಲ್ಲ. ಬದಲಾಗಿ ಜೂನ್ 10ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸದ್ಯದ ಸ್ಥಿತಿಯನ್ನು ನೋಡಿದಾಗ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಸಂಘಟಿಸುವುದು ದೂರದ ಮಾತಾಗಿದೆ. ಆದ್ರೂ ಮೈದಾನದಲ್ಲಿ ಪ್ರೇಕ್ಷಕರು ಇಲ್ಲದೆ ಪ್ರತಿಷ್ಠಿತ ಟೂರ್ನಿಯನ್ನು ಸಂಘಟಿಸುವ ಯೋಚನೆಯೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮುಂದಿದೆ.
ಆದ್ರೆ ಐಸಿಸಿಯ ಈ ಯೋಚನೆಗೆ ಪಾಕಿಸ್ತಾನದ ಮಾಜಿ ವೇಗಿ ವಾಸೀಮ್ ಅಕ್ರಮ್ ಹೇಳುವುದು ಹೀಗೆ… ಪ್ರೇಕ್ಷಕರು ಇಲ್ಲದೆ ಪ್ರತಿಷ್ಠಿತ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ನಡೆಸುವುದು ನನಗೆ ಸೂಕ್ತ ಅಂತ ಅನ್ನಿಸುತ್ತಿಲ್ಲ. ಹೀಗಾಗಿ ಐಸಿಸಿ ತಾಳ್ಮೆಯಿಂದ ಕಾಯಬೇಕು. ಯಾಕಂದ್ರೆ ಐಸಿಸಿಯ ಈ ಐಡಿಯ ನನಗೆ ಹಿತವೆನಿಸುವುದಿಲ್ಲ. ಮೈದಾನದಲ್ಲಿ ಪ್ರೇಕ್ಷಕರಿಲ್ಲದೆ ವಿಶ್ವಕಪ್ ಟೂರ್ನಿಯನ್ನು ಹೇಗೆ ಆಡಿಸಲು ಸಾಧ್ಯ ಅಂತಾರೆ ವಾಸೀಮ್ ಅಕ್ರಮ್.
ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮೈದಾನದಲ್ಲಿ ನೋಡಲು ಜನ ಉತ್ಸುಕರಾಗಿರುತ್ತಾರೆ. ತಮ್ಮ ನೆಚ್ಚಿನ ತಂಡಗಳಿಗೆ ಬೆಂಬಲ ನೀಡಲು ಜಗತ್ತಿನ ವಿವಿಧ ದೇಶಗಳಿಂದ ಜನರು ಬರುತ್ತಾರೆ. ಪ್ರೇಕ್ಷಕರ ಭರಾಟೆಯ ನಡುವೆಯುವಂತಹ ವಿಶ್ವಕಪ್ ಪಂದ್ಯವನ್ನು ಪ್ರೇಕ್ಷಕರಿಲ್ಲದೆ ನಡೆಸುವುದನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನನಗೆ ಐಸಿಸಿಯ ಮೇಲೆ ನಂಬಿಕೆ ಇದೆ. ಕೊರೋನಾ ವೈರಸ್‍ನ ಹಾವಳಿ ಕಡಿಮೆಯಾಗುವ ತನಕ ಕಾಯುವುದು ಒಳ್ಳೆಯದ್ದು. ಆನಂತರ ಸೂಕ್ತ ವೇಳಾಪಟ್ಟಿಯನ್ನು ಮಾಡಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ನಡೆಸುವುದು ಒಳ್ಳೆಯದ್ದು ಎಂಬುದು ವಾಸೀಮ್ ಅಕ್ರಮ್ ಅವರ ಅಭಿಮತವಾಗಿದೆ.
ಇನ್ನು ಚೆಂಡಿಗೆ ಎಂಜಲು ಹಚ್ಚಬಾರದು ಅನ್ನೋ ಐಸಿಸಿಯ ಹೊಸ ನಿಯಮದ ಬಗ್ಗೆ ಹೇಳುವುದು ಹೀಗೆ.. ಚೆಂಡಿನ ಹೊಳಪು ಕಡಿಮೆಯಾಗಲು ಎಂಜಲು ಹಚ್ಚುವ ಬದಲು ಬೆವರು ಬಳಸಬಹುದು ಎಂದು ಐಸಿಸಿ ಹೇಳಿದೆ. ಆದ್ರೆ ಅತೀಯಾದ ಬೆವರು ಬಳಕೆ ಮಾಡಿದಾಗ ಚೆಂಡು ಕೂಡ ಒದ್ದೆಯಾಗುವ ಸಾಧ್ಯತೆ ಇದೆ. ಹೀಗಾಗಿ ಐಸಿಸಿ ಪರ್ಯಾಯ ಮಾರ್ಗವನ್ನು ಕಂಡು ಹಿಡಿಯಬೇಕು ಎಂದು ವಾಸೀಮ್ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.








