ಆಗಸ್ಟ್ 1 ರಿಂದ ಬದಲಾಗಲಿವೆ ಈ ನಿಯಮಗಳು, ಬ್ಯಾಂಕ್ ವ್ಯವಸ್ಥೆ, LPG ಯಲ್ಲಿ ಬದಲಾವಣೆ…
ಆಗಸ್ಟ್ 1 ರಿಂದ ಬದಲಾವಣೆಗಳು : ಜುಲೈ ತಿಂಗಳು ಬಹುತೇಕ ಅಂತ್ಯಗೊಳ್ಳುತ್ತಿದ್ದು, ಆಗಸ್ಟ್ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಪ್ರತಿ ತಿಂಗಳಂತೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರುವ ಕೆಲ ಬದಲಾವಣೆಗಳು ಆಗಸ್ಟ್ 1 ರಿಂದ ಜಾರಿಗೆ ಬರಲಿವೆ. ಗ್ಯಾಸ್ ಬೆಲೆಯ ಹೊರತಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ನವೀಕರಣಗಳನ್ನ ತಿಳಿದುಕೊಳ್ಳಿ..
ಬ್ಯಾಂಕ್ ಆಫ್ ಬರೋಡಾ ಚೆಕ್ ಪಾವತಿ ವ್ಯವಸ್ಥೆ
ನೀವು ಬ್ಯಾಂಕ್ ಆಫ್ ಬರೋಡಾ ಗ್ರಾಹಕರಾಗಿದ್ದರೆ. ಈ ಸುದ್ದಿ ನಿಮ್ಮ ಉಪಯೋಗಕ್ಕೆ ಬರುತ್ತದೆ. ಆಗಸ್ಟ್ 1 ರಿಂದ, ಬ್ಯಾಂಕ್ ಆಫ್ ಬರೋಡಾ (BOB) ನಲ್ಲಿ ಚೆಕ್ ಮೂಲಕ ಪಾವತಿ ಮಾಡುವ ನಿಯಮಗಳು ಬದಲಾಗಲಿವೆ. ಆರ್ಬಿಐ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಆಗಸ್ಟ್ 1 ರಿಂದ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್ಗಳಿಗೆ ಧನಾತ್ಮಕ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದೆ. ಇದರ ಅಡಿಯಲ್ಲಿ, ಬ್ಯಾಂಕ್ ಎಸ್ಎಂಎಸ್, ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಚೆಕ್ಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕಾಗುತ್ತದೆ.
LPG ಸಿಲಿಂಡರ್ ಬೆಲೆಗಳು
ಪ್ರತಿ ತಿಂಗಳ 1 ನೇ ತಾರೀಖಿನಂತೆಯೇ ಈ ಬಾರಿಯೂ ಆಗಸ್ಟ್ 1 ರಿಂದ ಗ್ಯಾಸ್ ಸಿಲಿಂಡರ್ ದರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕಂಪನಿಗಳು ಈ ಬಾರಿ ಗೃಹೋಪಯೋಗಿ ಮತ್ತು ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯನ್ನು ಬದಲಾಯಿಸಬಹುದು. ಈ ಬಾರಿ ಸಿಲಿಂಡರ್ ದರ 20 ರಿಂದ 30 ರೂಪಾಯಿ ಬದಲಾಗಬಹುದು ಎನ್ನುತ್ತವೆ ಮೂಲಗಳು. ಕಳೆದ ಬಾರಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಕಡಿಮೆ ಮಾಡಲಾಗಿತ್ತು. ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ನ್ನು 50 ರೂ.ಹೆಚ್ಚಿಸಲಾಗಿತ್ತು.
ಆಗಸ್ಟ್ನಲ್ಲಿ 18 ದಿನಗಳ ಕಾಲ ಬ್ಯಾಂಕ್ಗಳಿಗೆ ರಜೆ
ಈ ಬಾರಿ ಮೊಹರಂ, ರಕ್ಷಾ ಬಂಧನ, ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿಯಂತಹ ಹಲವು ಹಬ್ಬಗಳು ಆಗಸ್ಟ್ನಲ್ಲಿ ಬಂದಿವೆ ಇದರಿಂದಾಗಿ ಈ ಬಾರಿ ವಿವಿಧ ರಾಜ್ಯಗಳು ಸೇರಿದಂತೆ ಒಟ್ಟು 18 ದಿನಗಳ ಕಾಲ ಬ್ಯಾಂಕ್ಗಳು ಬಂದ್ ಆಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಪಟ್ಟಿಯಲ್ಲಿ ಆಗಸ್ಟ್ನಲ್ಲಿ ಹಲವಾರು ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಎಂದು ಪ್ರಕಟಿಸಿದೆ. ಈ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ನಾಲ್ಕು ಭಾನುವಾರಗಳಂದು ಒಟ್ಟು 18 ದಿನಗಳ ಕಾಲ ಬ್ಯಾಂಕ್ಗಳು ರಜೆ ಇರಲಿವೆ.