ಸಿನಿಮಾಗಳನ್ನ ನೋಡಿ ಅದರಲ್ಲಿ ಬರುವ ಕೆಲ ಕ್ರೈಮ್ ಗಳ ಮಾದರಿಯಲ್ಲೇ ಅಪರಾಧಗಳು ನಡೆದಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಅದರಂತೆ ದೃಶ್ಯಂ ಚಿತ್ರವನ್ನ ನೋಡಿದ್ದ ಕಳ್ಳರು ಮನೆಗಳ್ಳತನ ಮಾಡಿ ಜೊತೆಗೆ ಪೊಲೀಸರಿಂದ ಎಸ್ಕೇಪ್ ಆಗಲು ಬ್ರಿಲಿಯಂಟ್ ಪ್ಲಾನ್ ಮಾಡಿದ್ರೂ ಕೂಡ ಕೊನೆಗೆ ಸಿಕ್ಕಿಬಿದ್ದಿದ್ದಾರೆ. ದೃಶ್ಯಂ ನಲ್ಲಿ ಪೊಲೀಸರು ಯಾವ ರೀತಿ ತನಿಖೆ ಮಾಡ್ತಾರೆ ಎಂದು ಗಮನಿಸಿದ್ದ ಆರೋಪಿಗಳು ತಾವು ಸಿಕ್ಕಿಹಾಕಿಕೊಳ್ಳದಂತೆ ಮನಗಳ್ಳತನಕ್ಕೆ ಸಂಚು ರೂಪಿಸಿ ಕಳ್ಳತನ ಮಾಡಿದ್ದಾರೆ. ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜನವರಿ 12 ರಂದು ಪುಲಿಕೇಶಿನಗರದಲ್ಲಿ ಮನೆ ಕಳ್ಳತನ ನಡೆದಿತ್ತು.
ಪ್ರಮುಖ ಆರೋಪಿ ನಾಝಿಂ ಶರೀಫ್ , ಮಹಮ್ಮದ್ ಶಫಿಯುಲ್ಲ ಸೇರಿ ಈ ಕಳ್ಳತನಕ್ಕೆ ಸ್ಕೆಚ್ ರೂಪಿಸಿದ್ದರು. ನಾಝಿಂ ತನ್ನ ಸ್ನೇಹಿತನ ಮನೆಗೆ ಕನ್ನ ಹಾಕಿದ್ದ. ಸ್ನೇಹಿತನ ಮನೆಯಲ್ಲಿಯೇ 50 ಲಕ್ಷ ಮೌಲ್ಯದ ಚಿನ್ನಾಭರಣ ಫಾರೀನ್ ಕರೆನ್ಸಿ ಸೇರಿ ಕಳ್ಳತನ ಮಾಡಿಸಿದ್ದ ಆರೋಪಿ ನಾಝಿಂ. ಅಷ್ಟೇ ಅಲ್ಲ ಕಳ್ಳತನದ ಬಳಿಕ ಆತನ ಜೊತೆಗೆ ಇದ್ದ.
ಕಳ್ಳತನಕ್ಕೆ ಬರುವ ಮುಂಚೆ ಗುರುತು ಸಿಗಬಾರದೆಂದು ಆರೋಪಿ ಶಫಿಯುಲ್ಲ 4 ಆಟೋಗಳನ್ನ ಬದಲಿಸಿದ್ದ. ಕಳ್ಳತನ ಮಾಡಿ ಮನೆ ಮಾಲೀಕನ ಹೋಂಡಾ ಆಕ್ಟೀವಾದಲ್ಲೇ ಪರಾರಿಯಾಗಿದ್ದ . ಜಾಕೆಟ್ ,ಹ್ಯಾಂಡ್ ಗ್ಲೌಸ್ , ಮುಖ ಸಂಪೂರ್ಣವಾಗಿ ಮುಚ್ಚಿ ಗುರುತು ಸಿಗದ ರೀತಿಯಲ್ಲಿ ಕವರ್ ಮಾಡಿಕೊಂಡಿದ್ದ ಈತ ಕಳ್ಳತನದ ಬಳಿಕ ಇಡೀ ಮನೆಗೆ ಖಾರದ ಪುಡಿ ಹಾಕಿದ್ದ.
ಆದ್ರೆ ಇಷ್ಟೆಲ್ಲಾ ಐಡಿಯಾಗಳನ್ನ ಶಪಿಯುಲ್ಲಾಗೆ ಕೊಟ್ಟು ಕಳ್ಳತನಕ್ಕೆ ಬಿಟ್ಟಿದ್ದು, ನಾಝಿಂ. ಪ್ರಮುಖ ಆರೋಪಿ ನಾಝಿಂ ಕಳ್ಳತನದ ಬಳಿಕವೂ ದೂರುದಾರನಾದ ತನ್ನ ಸ್ನೇಹಿತನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಇತ್ತ ಕದ್ದ ಬಳಿಕ ಯಾವುದೇ ಕಾರಣಕ್ಕೂ ಕರೆ ಮಾಡದಂತೆ ಎರಡನೇ ಆರೋಪಿಗೆ ತಾಕೀತು ಮಾಡಿದ್ದಾನೆ. ಈ ಸಂಬಂಧ 270 ಸಿಸಿಟಿವಿ ಚೆಕ್ ಮಾಡಿದ್ದ ಪೊಲೀಸರು ಆರೋಪಿಯ ಬಾಡಿ ಲಾಂಗ್ವೆಜ್ ನೋಡಿ ಟ್ರೇಸ್ ಮಾಡಿ ಆತನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಕಳ್ಳತನ ಮಾಡಿಸಿದ ನಾಝಿಂ, ಕಳ್ಳತನ ಮಾಡಿದ ಶಫಿಯುಲ್ಲಾ ಇಬ್ಬರೂ ಸಹ ಪೊಲೀಸರ ಅತಿಥಿಯಾಗಿದ್ದಾರೆ. ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಬಂಧಿತರಿಂದ 33 ಲಕ್ಷ ದೇಶಿಯ ಕರೆನ್ಸಿ, 12 ಲಕ್ಷ ವಿದೇಶಿ ಕರೆನ್ಸಿ, 6 ಲಕ್ಷ ಮೌಲ್ಯದ ಚಿನ್ನ, ಕಾರು, ನಗದು ಸೇರಿ ಒಟ್ಟು 70 ಲಕ್ಷ ಮೌಲ್ಯದ ವಸ್ತುಗಳುನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.