ವಿಜಯನಗರ: ಪೂಜೆಯ ಹೆಸರಿನಲ್ಲಿ ಖದೀಮರು ಕೋಟಿ ಕೋಟಿ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಹಾಕಿದ ಹಣಕ್ಕೆ ಹತ್ತು ಪಟ್ಟು ಹಣ ನೀಡುತ್ತೇವೆಂದು ಹೇಳಿ ಜನರಿಂದ ಹಣ ಪಡೆದು ವಂಚಿಸಿದ್ದಾರೆ. ಕಲ್ಲಹಳ್ಳಿ ತಾಂಡಾದ 60ಕ್ಕೂ ಅಧಿಕ ಜನರಿಂದ 2 ಕೋಟಿ ರೂ.ಗೂ ಅಧಿಕ ಹಣ ಲೂಟಿ ಮಾಡಿದ್ದಾರೆ. ನಿಮ್ಮ ಕಷ್ಟ ಪರಿಹಾರ ಮಾಡುತ್ತೇವೆಂದು ರಾತ್ರಿ ವೇಳೆ ಬಂದು ಪೂಜೆ ಮಾಡಿ ಹಣ ಇಡಲಾಗುತ್ತಿತ್ತು. ಮಾತ್ರವಲ್ಲದೇ ಎಲ್ಲರ ಮೊಬೈಲ್ ಪೋನ್ ಪ್ಲೈಟ್ ಮೂಡಿಗೆ ಹಾಕಿಸಿ, ಲೈಟ್ ಆಫ್ ಮಾಡಿ ಪೂಜೆ ಮಾಡುತ್ತೇವೆ ಎಂದು ಹೇಳುತ್ತಿದ್ದರು.
ಜನರು ಕೊಟ್ಟ ಹಣವನ್ನು ಬಾಕ್ಸ್ ನಲ್ಲಿ ಹಾಕುತ್ತೇವೆ ನೀವು ಹೊರಗೆ ಹೋಗಿ ಎಂದು ಹೇಳಿ ಅವರನ್ನು ಕಳುಹಿಸಿ, 168 ದಿನಗಳವರೆಗೆ ಈ ಬಾಕ್ಸ್ ಓಪನ್ ಮಾಡಬಾರದು. ಇದರಲ್ಲಿನ ಹಣ 10 ಪಟ್ಟು ಹೆಚ್ಚಾಗುತ್ತದೆ ಎಂದು ನಂಬಿಸಿ ಜನರಿಗೆ ವಂಚನೆ ಮಾಡಿದ್ದರು.
ಖದೀಮರ ಗ್ಯಾಂಗ್ನಿಂದ ಮೋಸಹೋದ ಕಲ್ಲಹಳ್ಳಿ ತಾಂಡಾದ ಕುಮಾರ ನಾಯ್ಕ್ ಎಂಬಾತ ಹೊಸಪೇಟೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಸದ್ಯ ದೂರಿನ ಹಿನ್ನೆಲೆಯಲ್ಲಿ ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್, ಆತನಿಗೆ ಸಹಕರಿಸುತ್ತಿದ್ದ ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ್, ಶಂಕು ನಾಯ್ಕ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 35 ಲಕ್ಷ ರೂ. ನಗದು, ನೋಟು ಎಣಿಸುವ 1 ಯಂತ್ರ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಕೆಲವು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.








