ಕಲಬುರಗಿ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು “ನವ ಕಲಬುರಗಿ” ನಿರ್ಮಾಣಕ್ಕೆ ಬೃಹತ್ ನೀಲನಕ್ಷೆ ಸಿದ್ಧವಾಗಿದ್ದು, ಮುಂದಿನ ಒಂದು ವರ್ಷದೊಳಗೆ ಇದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದರು.
ನಗರದ ಗಂಜ್ ಪ್ರದೇಶದ ನಗರೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಿತ್ರಣವನ್ನು ಬದಲಾಯಿಸುವ ಮಹತ್ವಾಕಾಂಕ್ಷೆಯ ಯೋಜನೆಗಳ ಪಟ್ಟಿಯನ್ನು ಅನಾವರಣಗೊಳಿಸಿದರು.
ನವ ಕಲಬುರಗಿಯ ಕನಸು: LEAP ಯೋಜನೆ
“ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನವೋದ್ಯಮ, ಪ್ರವಾಸೋದ್ಯಮ, ಯುವ ಸಬಲೀಕರಣ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾವಲಂಬನೆಯನ್ನು ಕೇಂದ್ರವಾಗಿಟ್ಟುಕೊಂಡು ‘ನವ ಕಲಬುರಗಿ’ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಇದರ ಸಂಪೂರ್ಣ ವಿವರಗಳನ್ನು ಮುಂದಿನ ಎರಡು ವಾರಗಳಲ್ಲಿ ಸಾರ್ವಜನಿಕರ ಮುಂದಿಡಲಾಗುವುದು” ಎಂದು ಸಚಿವರು ಭರವಸೆ ನೀಡಿದರು.
ಈ ಯೋಜನೆಯ ಅಡಿಯಲ್ಲಿ, ಮೈಸೂರು ಮತ್ತು ಮಂಗಳೂರಿನ ಮಾದರಿಯಲ್ಲಿ “ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ” (Local Economy Accelerator Programme – LEAP) ವನ್ನು ಕಲಬುರಗಿಯಲ್ಲಿ ಜಾರಿಗೊಳಿಸಲಾಗುವುದು. ಇದರ ಮೂಲಕ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಗೆ ಹೊಸ ವೇಗ ನೀಡಲಾಗುವುದು ಎಂದು ಅವರು ತಮ್ಮ ಕನಸಿನ ಯೋಜನೆಗಳನ್ನು ವಿವರಿಸಿದರು.
ಕೈಗಾರಿಕೆ ಮತ್ತು ಕೃಷಿಗೆ ಹೊಸ ಶಕ್ತಿ
* ಕೈಗಾರಿಕಾ ಪ್ರಗತಿ: ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ತಯಾರಿಕಾ ಘಟಕಗಳು, ರಾಸಾಯನಿಕ ಮತ್ತು ಅನಿಲ ಕೈಗಾರಿಕೆಗಳು, ಫುಡ್ ಪಾರ್ಕ್ ಹಾಗೂ ಸುಸ್ಥಿರ ವಿದ್ಯುನ್ಮಾನ ಉದ್ಯಾನ ಸ್ಥಾಪಿಸಲಾಗುತ್ತಿದೆ. ಜೊತೆಗೆ, ಕಪನೂರ ಕೈಗಾರಿಕಾ ಪ್ರದೇಶದಲ್ಲಿ 400 ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ “ಆಟೋ ಮತ್ತು ಜನರಲ್ ಎಂಜಿನಿಯರಿಂಗ್ ಕ್ಲಸ್ಟರ್” ನಿರ್ಮಿಸಲಾಗುವುದು.
* ಕೃಷಿ ಕ್ರಾಂತಿ: ಜಿಲ್ಲೆಯಾದ್ಯಂತ 9 ಕೃಷಿ ಯಂತ್ರಧಾರೆ ಕೇಂದ್ರಗಳು, ಡ್ರೋನ್ ಸಿಂಪಡಣಾ ಕೇಂದ್ರಗಳು, 3 ಕೋಟಿ ರೂ. ವೆಚ್ಚದಲ್ಲಿ ಸಿರಿಧಾನ್ಯ ಸಂಸ್ಕರಣಾ ಕೇಂದ್ರ ಮತ್ತು 10 ಕೋಟಿ ರೂ. ವೆಚ್ಚದಲ್ಲಿ ಶೀಥಲೀಕರಣ ಘಟಕ ಸ್ಥಾಪಿಸಲಾಗುತ್ತಿದೆ. ಕೃಷಿಯಲ್ಲಿ ತಂತ್ರಜ್ಞಾನವನ್ನು ಬೆಸೆಯಲು “ಅಗ್ರಿ-ಟೆಕ್ ವೇಗವರ್ಧಕ” ಸ್ಥಾಪಿಸುವ ಗುರಿ ಹೊಂದಲಾಗಿದೆ.
ಬಿಯಾಂಡ್ ಬೆಂಗಳೂರು: ಇನ್ನೋವೇಷನ್‌ಗೆ ಒತ್ತು
ಸರ್ಕಾರದ ಮಹತ್ವಾಕಾಂಕ್ಷೆಯ ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಕಲಬುರಗಿಯಲ್ಲಿ ಅತ್ಯಾಧುನಿಕ ಇನ್ನೋವೇಷನ್ ಸೆಂಟರ್ ಸ್ಥಾಪಿಸಲಾಗುತ್ತಿದೆ. “2030ರ ವೇಳೆಗೆ 500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಪೋಷಿಸುವುದು, ಕನಿಷ್ಠ 1,000 ನೇರ ಉದ್ಯೋಗ ಸೃಷ್ಟಿಸುವುದು ಹಾಗೂ ಕಲ್ಯಾಣ ಕರ್ನಾಟಕವನ್ನು ಡಿಜಿಟಲ್ ಮತ್ತು ಕೃಷಿ ತಂತ್ರಜ್ಞಾನದ ಹಬ್ ಆಗಿ ರೂಪಿಸುವುದು ನಮ್ಮ ಗುರಿ” ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ರೈತರಿಗೆ ಶೀಘ್ರ ಪರಿಹಾರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 3.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸಂತ್ರಸ್ತ ರೈತರಿಗೆ NDRF ಮತ್ತು SDRF ನಿಯಮಗಳ ಅಡಿಯಲ್ಲಿ ಪರಿಹಾರ ವಿತರಿಸಲಾಗುವುದು. ಮೊದಲ ಕಂತಿನ ಹಣವನ್ನು ಮುಂದಿನ ಎರಡು ವಾರಗಳೊಳಗೆ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು” ಎಂದು ಸ್ಪಷ್ಟಪಡಿಸಿದರು.
ಕಲಬುರಗಿ ಜಿಡಿಪಿ ಹೆಚ್ಚಳದ ಗುರಿ
ರಾಜ್ಯದ ಜಿಡಿಪಿಗೆ ಬೆಂಗಳೂರು ಶೇ.40ರಷ್ಟು ಕೊಡುಗೆ ನೀಡಿದರೆ, ಕಲಬುರಗಿಯ ಪಾಲು ಕೇವಲ ಶೇ.1.9ರಷ್ಟಿದೆ. “ನವ ಕಲಬುರಗಿ ಯೋಜನೆಯ ಮೂಲಕ ನವೋದ್ಯಮ, ಕೈಗಾರಿಕೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿ, ಮುಂದಿನ ಒಂದು ವರ್ಷದೊಳಗೆ ಜಿಲ್ಲೆಯ ಜಿಡಿಪಿ ಕೊಡುಗೆಯನ್ನು ಶೇ. 2.15ಕ್ಕೆ ಏರಿಸುವ ಗುರಿ ಹೊಂದಿದ್ದೇವೆ” ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಿಗರ ಶಕ್ತಿಗೆ ಜಾಗತಿಕ ಮೆಚ್ಚುಗೆ
ಕನ್ನಡಿಗರ ಸಾಮರ್ಥ್ಯವನ್ನು ಶ್ಲಾಘಿಸಿದ ಸಚಿವರು, “ಜರ್ಮನ್ ಮೂಲದ ಮರ್ಸಿಡೀಸ್ ಬೆಂಜ್ ಅಧ್ಯಕ್ಷರು, ಬೆಂಗಳೂರಿನ ಸಂಶೋಧನಾ ಕೇಂದ್ರದಲ್ಲಿ ಕನ್ನಡಿಗರು ನಿರರ್ಗಳವಾಗಿ ಜರ್ಮನ್ ಮಾತನಾಡುತ್ತಾ ಕೆಲಸ ಮಾಡುವುದನ್ನು ಕಂಡು ಬೆರಗಾಗಿದ್ದರು. ಕನ್ನಡಿಗರ ಸೌಹಾರ್ದತೆ ಮತ್ತು ಪ್ರತಿಭೆ ವಿಶ್ವಮಟ್ಟದಲ್ಲಿ ಗೌರವ ಗಳಿಸಿದೆ” ಎಂಬ ಘಟನೆಯನ್ನು ಮೆಲುಕು ಹಾಕಿದರು.
ಕಾರ್ಯಕ್ರಮಕ್ಕೂ ಮುನ್ನ ಸಚಿವರು ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಭವ್ಯವಾದ ಭಾವಚಿತ್ರ ಹಾಗೂ ಸ್ತಬ್ಧಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.








