ಬೆಂಗಳೂರು : ಇದೊಂದು ಕೆಟ್ಟ ಸರ್ಕಾರ. ಜನ ದ್ರೋಹಿ ಸರ್ಕಾರ. ರಾಜ್ಯಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನೆರೆ ಪರಿಹಾರ, ಜಿಎಸ್ ಟಿ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಜವಾಬ್ದಾರಿಯನ್ನ ನಿರ್ವಹಿಸಲು ಆಗದೇ ರಾಜ್ಯದ ಮೇಲೆ ಭಾರ ಹಾಕಲು ಹೊರಟಿದ್ದಾರೆ. ರಾಜ್ಯಗಳಿಗೆ ಒತ್ತಡ ಹಾಕುವ ನೀತಿಯನ್ನ ಖಂಡಿಸುತ್ತೇನೆ. ಕೇಂದ್ರ ಸರ್ಕಾರ ಏನಾದ್ರೂ ಮಾಡಲಿ, ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಾದ ಜಿಎಸ್ ಟಿ ಪರಿಹಾರವನ್ನ ಕೊಡಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕೇಂದ್ರ, ರಾಜ್ಯ ಎರಡು ಕಡೆ ಒಂದೇ ಸರ್ಕಾರ ಇದ್ದರೆ ಅನುಕೂಲ ಆಗುತ್ತೆ ಅಂತ 25 ಸಂಸದರನ್ನ ಆಯ್ಕೆ ಮಾಡಿ ಕಳುಹಿಸಿಕೊಟ್ಟ ಜನರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ. ಇದೊಂದು ಕೆಟ್ಟ ಸರ್ಕಾರ. ಜನ ದ್ರೋಹಿ ಸರ್ಕಾರ ಎಂದು ಕೇಂದ್ರದ ವಿರುದ್ಧ ಬೆಂಕಿಕಾರಿದ ಸಿದ್ದರಾಮಯ್ಯ, ರಾಜ್ಯಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹುಲಿಯಾ, ಈಗ ಎರಡನೇ ಬಾರಿ ಪ್ರವಾಹ ಬಂದಿದೆ. ಹಿಂದಿನ ಪ್ರವಾಹ ಹಾನಿ ಪರಿಹಾರವನ್ನೇ ಕೊಟ್ಟಿಲ್ಲ. ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ ಸಚಿವರುಗಳು ಏನ್ ಮಾಡ್ತಾ ಇದ್ದಾರೆ. ಕಂದಾಯ ಸಚಿವ ಅಶೋಕ್ ಏನ್ ಮಾಡಿದ್ರು ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ನೆರೆ ಹಾನಿ ಪರಿಹಾರವನ್ನು ಕೊಟ್ಟಿಲ್ಲ. ಪ್ರಧಾನಿ ಬಳಿ ಹೋಗಿ ಮಾತನಾಡಲು ಯಾರಿಗೂ ಧೈರ್ಯ ಇಲ್ಲ. ಹೀಗಾಗಿ ಇದೊಂದು ಪುಕ್ಕಲ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.