ಲಡಾಖ್ ಘರ್ಷಣೆಯಲ್ಲಿ ಮಡಿದ ಸೈನಿಕರ ಸಂಖ್ಯೆಯನ್ನು ಚೀನಾ ಮರೆಮಾಚಲು ಕಾರಣ ಇಲ್ಲಿದೆ

ಲಡಾಖ್ ಘರ್ಷಣೆಯಲ್ಲಿ ಮಡಿದ ಸೈನಿಕರ ಸಂಖ್ಯೆಯನ್ನು ಚೀನಾ ಮರೆಮಾಚಲು ಕಾರಣ ಇಲ್ಲಿದೆ

ಹೊಸದಿಲ್ಲಿ, ಜುಲೈ 1: ಜೂನ್ 15ರ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, ಚೀನಾ ಇನ್ನೂ ಕೂಡ ಘರ್ಷಣೆಯಲ್ಲಿ ಸಾವನ್ನಪ್ಪಿದ ತನ್ನ ಯೋಧರ ನಿಖರವಾದ ಸಂಖ್ಯೆಯನ್ನು ತಿಳಿಸಿಲ್ಲ. ಚೀನಾ ತನ್ನ ಯೋಧರ ಸಂಖ್ಯೆಯನ್ನು ಮುಚ್ಚಿಡಲು ಕಾರಣವೇನು ಎಂಬುವುದು ಚೀನಾದ ಮಿಲಿಟರಿ ದೈನಿಕ ಚೈನಾ ನ್ಯಾಷನಲ್​ ಡಿಫೆನ್ಸ್​ ಪತ್ರಿಕೆಯ ವರದಿಯಿಂದ ಬಹಿರಂಗವಾಗಿದೆ.
ಕಣಿವೆ ಪ್ರದೇಶದಲ್ಲಿ ಭಾರತೀಯ ಯೋಧರೊಂದಿಗೆ ಘರ್ಷಣೆಗೆ ಇಳಿದವರು ಚೀನಾದ ಪರ್ವತಾರೋಹಿಗಳ ತಂಡ, ಜೂಡೋ ಮತ್ತು ಕರಾಟೆ ಸೇರಿ ಮಿಶ್ರಕದನಕಲೆಗಳನ್ನು ಬಲ್ಲ ಕಲಿಗಳು ಎಂಬ ಸತ್ಯ ಚೈನಾ ಪ್ರತಿಕೆ ವರದಿಗಳಿಂದ ರುಜುವಾಗಿದೆ.

ಚೀನಾದ ಮಿಲಿಟರಿ ದೈನಿಕ ಚೈನಾ ನ್ಯಾಷನಲ್​ ಡಿಫೆನ್ಸ್​ ಪತ್ರಿಕೆ ಈ ಕುರಿತು ವರದಿ ಮಾಡಿದ್ದು, ಚೀನಾ ಐದು ಹೊಸ ಸಹಾಯಕ ಸೇನಾಪಡೆಗಳ ಡಿವಿಜನ್​ ಅನ್ನು ಘರ್ಷಣೆಯಲ್ಲಿ ಭಾಗಿಯಾಗಲೆಂದೇ ಗಾಲ್ವಾನ್ ಕಣಿವೆಗೆ ಕಳುಹಿಸಿತ್ತು. ಈ ಡಿವಿಜನ್​ ಗಳಲ್ಲಿ ಮೌಂಟ್​ ಎವರೆಸ್ಟ್​ ಒಲಿಂಪಿಕ್​ ಜ್ಯೋತಿ ರಿಲೇ ತಂಡದ ಸದಸ್ಯರು ಮತ್ತು ಮಿಶ್ರ ಕದನಕಲೆಗಳ ಕ್ಲಬ್​ನ ಹಲವು ಕದನಕಲಿಗಳು ಇದ್ದು, ಪೀಪಲ್ಸ್​ ಲಿಬರೇಷನ್​ ಆರ್ಮಿಯ ಯೋಧರು ಬೆರಳೆಣಿಕೆಯಷ್ಟು ಇದ್ದು, ಅವರ ಬದಲು ಇವರನ್ನು ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಲು ಟಿಬೆಟ್​ ರಾಜಧಾನಿ ಲ್ಹಾಸಾಕ್ಕೆ ಕಳುಹಿಸಲಾಗಿತ್ತು ಎಂದು ಚೀನಾದ ದೈನಿಕ ಪತ್ರಿಕೆ ವರದಿ ಮಾಡಿದೆ. ಟಿಬೆಟ್​ನ ರಾಜಧಾನಿಯಲ್ಲಿ ಬೃಹತ್​ ಸೇನಾಪಡೆಯನ್ನು ಲಡಾಖ್​ನ ಪೂರ್ವಭಾಗದಲ್ಲಿನ ಎಲ್ಲ ವಿವಾದಿತ ಗಡಿ ಪ್ರದೇಶಗಳಿಗೆ ರವಾನಿಸಲು ಸಜ್ಜುಗೊಳಿಸಿರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಚೀನಾದ ರಾಷ್ಟ್ರೀಯ ಟಿವಿ ಪ್ರಸಾರ ಮಾಡಿದೆ.
ಟಿಬೆಟ್​ ಕಮಾಂಡರ್​ ವ್ಯಾಂಕ್​ ಹೈಜಿಯಾಂಗ್​, ತಮ್ಮ ಸೇನಾಪಡೆಯ ಈ ಕೃತ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಫೈಟ್​ ಕ್ಲಬ್​ನ ಕದನಕಲಿಗಳನ್ನು ಯೋಧರಿಗೆ ಬದಲಾಗಿ ಬಳಸಿಕೊಳ್ಳುವುದರಿಂದ, ಸೇನಾಪಡೆಗೆ ಹೆಚ್ಚುವರಿ ಶಕ್ತಿ ಲಭಿಸಿದಂತಾಗುತ್ತದೆ. ಎಂಥ ಪರಿಸ್ಥಿತಿಗೆ ಬೇಕಾದರೂ ತ್ವರಿತವಾಗಿ ಸ್ಪಂದಿಸುವ ಸಾಮರ್ಥ್ಯ ಇವರಲ್ಲಿ ಇರುವುದರಿಂದ, ವೈರಿಗಳನ್ನು ಸೋಲಿಸಲು ಸುಲಭವಾಗುತ್ತದೆ ಎಂದು ಹೇಳಿರುವುದಾಗಿ ಚೈನಾ ನ್ಯಾಷನಲ್​ ಡಿಫೆನ್ಸ್​ ನ್ಯೂಸ್​ ಹೇಳಿದೆ.
ಭಾರತೀಯ ಯೋಧರೊಂದಿಗಿನ ಘರ್ಷಣೆಯಲ್ಲಿ ಪರ್ವತಾರೋಹಿಗಳು ಮತ್ತು ಮಿಶ್ರಕದನ ಕಲೆಗಳ ಕಲಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪಿದ್ದು, ಬೆರಳೆಣಿಕೆಯ ಯೋಧರು ಸತ್ತಿದ್ದಾರೆ.‌ ಈ ವಿಷಯ ಹೊರಬಿದ್ದರೆ ತನ್ನ ಕುತಂತ್ರ ಬುದ್ಧಿ ಜಗಜ್ಜಾಹೀರವಾಗುವ ಭಯದಿಂದ ಚೀನಾ ಘರ್ಷಣೆಯಲ್ಲಿ ಮಡಿದ ಯೋಧರ ಬಗ್ಗೆ ನಿಖರ ಮಾಹಿತಿ ನೀಡಲು ನಿರಾಕರಿಸುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This