ಮೈಸೂರು : ಈ ಬಾರಿ ಸರಳವಾಗಿ ದಸರಾ ಆಚರಿಸಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಕಬಿನಿ ಜಲಾಶಯ ಬಳಿಯ ಮಾತನಾಡಿದ ಬಿಎಸ್ ವೈ, ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಇದರ ರೂಪುರೇಷೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಗೆ ಶೀಘ್ರದಲ್ಲೇ ದಿನಾಂಕ ನಿಗದಿ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ನಂಜನಗೂಡು ವೈದ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಪರಿಹಾರ ಘೋಷಣೆ ಮಾಡಿದ್ದೇವೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನು ರಾಜ್ಯಾದ್ಯಂತ ಉತ್ತಮವಾಗಿ ಮಳೆ ಆಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿಯುವುದು ತಪ್ಪಿದೆ. ಎಲ್ಲಾ ಕಡೆ ಬೀಜ ಬಿತ್ತನೆ ನಡೆಯುತ್ತಿದೆ. ಇಂದು ಕಬಿನಿಗೆ ಬಾಗಿನ ಅರ್ಪಿಸಲು ಬಂದಿದ್ದೇವೆ. ಜಲಾಶಯಗಳು ಭರ್ತಿಯಾಗಿದ್ದು ಸುದೈವ ಎಂದು ಸಿಎಂ ಹೇಳಿದರು.