ಕಲಬುರಗಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತವೊಂದು ನಡೆದಿದ್ದು, ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಕಮಲಾಪೂರ ತಾಲೂಕಿನ ಮರಗುತ್ತಿ ಕ್ರಾಸ್ ಹತ್ತಿರ ಈ ಘಟನೆ ನಡೆದಿದೆ. ಮಹೀಂದ್ರ ಪಿಕಪ್ ವಾಹನ ಹಾಗೂ ಕಾರಿನ ಮಧ್ಯೆ ಈ ಅಪಘಾತ ನಡೆದಿದೆ. ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ನುಜ್ಜುಗುಜ್ಜಾಗಿವೆ. ಘಟನೆಯಲ್ಲಿಭಾರ್ಗವ್ ಕೃಷ್ಣ (55), ಪತ್ನಿ ಸಂಗೀತಾ (45), ಪುತ್ರ ಉತ್ತಮ್ ರಾಘವನ್ (28) ಹಾಗೂ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದವರು ಹೈದರಾಬಾದ್ ನಿವಾಸಿಗಳು ಎನ್ನಲಾಗಿದೆ. ಇವರು ಹೈದರಾಬಾದ್ ನಿಂದ ಗಾಣಗಾಪುರ ದತ್ತನ ದೇಗುಲಕ್ಕೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಕಮಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.