ಹಾಸನ: ಯುವಕನೊಬ್ಬ ಪ್ರೀತಿಸುವಂತೆ ಯುವತಿಗೆ ಕಿರುಕುಳ ನೀಡಿದ ಪರಿಣಾಮ ಯುವತಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಬೇಲೂರಿನ (Beluru) ನಿಡಗೂಡು ಗ್ರಾಮದಲ್ಲಿ ನಡೆದಿದೆ. ಸಂಗೀತಾ (21) ಆತ್ಮಹತ್ಯೆಗೆ ಶರಣಾದ ಯುವತಿ ಎನ್ನಲಾಗಿದ್ದು, ಹೊನ್ನಯ್ಯ ಎಂಬುವವರ ಪುತ್ರ ಶಿವು ಎಂಬಾತ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಯುವತಿಯ ಪೋಷಕರಲ್ಲಿ ಕೂಡ ಮದುವೆ ಪ್ರಸ್ತಾಪ ಮಾಡಿದ್ದ. ಇದಕ್ಕೆ ಅವರು ಒಪ್ಪಿರಲಿಲ್ಲ. ಆದರೂ ಆತ ಪ್ರೀತಿಸುವಂತೆ ಪೀಡಿಸುತ್ತಿದ್ದ.
ಇತ್ತೀಚೆಗಷ್ಟೇ ಬೇಲೂರಿನ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಯುವತಿ ತೆರಳಿದ್ದರು. ಈ ಸಂದರ್ಭದಲ್ಲಿ ಶಿವು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಫೋನ್ ಮಾಡಿದರೂ ಏಕೆ ರಿಸೀವ್ ಮಾಡುವುದಿಲ್ಲ ಎಂದು ತಲೆಗೆ ಹೊಡೆದಿದ್ದಾನೆ. ನಂತರ ನನ್ನನ್ನು ಪ್ರೀತಿ ಮಾಡುವುದಿಲ್ಲವೆಂದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜನರ ಎದುರೇ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಬೇಲೂರು ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








