ಚಿತ್ತೂರು : ಇಂದು ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಜನ್ಮದಿನ. ಪಿಕೆಯನ್ನು ದೇವರಂತೆ ಪೂಜಿಸುವ ಅಭಿಮಾನಿಗಳಿಗೆ ಇಂದು ಹಬ್ಬದ ದಿನ. ಏತನ್ಮಧ್ಯೆ ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟಲು ಹೋದ ಮೂವರು ಅಭಿಮಾನಿಗಳು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಚಿತ್ತೂರು ಜಿಲ್ಲೆಯ ಶಾಂತಿಪುರದಲ್ಲಿ ನಿನ್ನೆ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಸೋಮಶೇಖರ್ (30), ಅವರ ಸಹೋದರ ರಾಜೇಂದ್ರ (32) ಹಾಗೂ ಸ್ನೇಹಿತ ಅರುಣಾಚಲಂ (28) ಮೃತಪಟ್ಟಿದ್ದಾರೆ.
ಅಭಿಮಾನಿಗಳ ನಿಧನಕ್ಕೆ ಪವನ್ ಕಲ್ಯಾಣ್ ಕಂಬನಿ ಮಿಡಿದಿದ್ದಾರೆ. ಅವರ ಜನಸೇವಾ ಪಾರ್ಟಿಯ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಸಂತಾಪ ಸೂಚಿಸಲಾಗಿದೆ. ಮೃತಪಟ್ಟ ಮೂವರ ಕುಟುಂಬಗಳಿಗೆ ಜನಸೇನಾ ಪಾರ್ಟಿ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ.








