ನವದೆಹಲಿ: ರಾಜ್ಯದಲ್ಲಿ ಈಗಲೇ ದಾಖಲೆಯ ಮಟ್ಟದ ಬಿಸಿಲು ಇದ್ದು, ಜನರು ಪರಿತಪಿಸುವಂತಾಗಿದ್ದಾರೆ. ಇದರ ಮಧ್ಯೆ ಇನ್ನೂ ಮೂರು ತಿಂಗಳು ಬಿಸಿಲು ಹೆಚ್ಚಾಗರಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಜನರನ್ನು ಮತ್ತಷ್ಟು ಹೈರಾಣು ಮಾಡಿದೆ.
ಮುಂದಿನ 3 ತಿಂಗಳು ಬಿಸಿಲಿನ ಕಾಟ ಇರಲಿದ್ದು, ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ನಿಂದ ಜೂನ್ವರೆಗೆ ದೇಶದ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಾಗಿರಲಿದೆ. ದೇಶದ ಮಧ್ಯಭಾಗದಲ್ಲಿ ಹಾಗೂ ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಹೆಚ್ಚಿನ ತಾಪಮಾನದ ಸಾಧ್ಯತೆ ಇರಲಿದೆ. ದೇಶದ ಬಹುತೇಕ ಕಡೆಗಳಲ್ಲಿ ಏಪ್ರಿಲ್ ನಲ್ಲಿ ಗರಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುಜರಾತ್, ಮಹಾರಾಷ್ಟ್ರದ ಮಧ್ಯಭಾಗ, ಉತ್ತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್ಗಢದ ಉತ್ತರ ಭಾಗ ಮತ್ತು ಆಂಧ್ರ ಪ್ರದೇಶದಲ್ಲಿ ಕೂಡ ಬಿಸಿಗಾಳಿ ತೀರಾ ಕೆಟ್ಟದಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಗಾಳಿಯ ಪರಿಣಾಮವು ಒಂದರಿಂದ ಮೂರು ದಿನಗಳವರೆಗೆ ಇರುವುದು ವಾಡಿಕೆ. ಆದರೆ ಈ ಬಾರಿ ಅದು ಎರಡರಿಂದ ಎಂಟು ದಿನಗಳವರೆಗೆ ಇರಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ.