ಬೆಳಗಾವಿ: ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೂವರಿಗೆ ಚಾಕು ಇರಿದಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಚೆನ್ನಮ್ಮ ವೃತ್ತದ (Chennamma Circle) ಹತ್ತಿರ ನಡೆದಿದೆ. ಗಾಯಾಳುಗಳನ್ನು ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳಾದ ಪ್ರವೀಣ್ ಗುಂಡ್ಯಾಗೋಳ್, ದರ್ಶನ್ ಪಾಟೀಲ್ ಮತ್ತು ಸತೀಶ್ ಪೂಜಾರಿ ಎಂದು ಗುರುತಿಸಲಾಗಿದೆ.
ಘಟನೆ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ (Iada Martin) ಮಾಹಿತಿ ನೀಡಿದ್ದಾರೆ. ಪ್ರವೀಣ್ ಗುಂಡ್ಯಾಗೋಳ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ (BIMS) ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಡ್ಯಾನ್ಸ್ ಮಾಡುವಾಗ ಕಾಲು ತಾಕಿದ್ದಕ್ಕೆ ಹುಡುಗರು ಕಿರಿಕ್ ಮಾಡಿಕೊಂಡಿದ್ದರಿಂದಾಗಿ ಈ ಘಟನೆ ನಡೆದಿದೆ. ಜಗಳ ಮಾಡಿಕೊಂಡಿದ್ದ ಯುವಕರು ಹೊರ ಬಂದು ಗಲಾಟೆ ಮಾಡಿದ್ದಾರೆ. ಯುವಕರ ಗ್ಯಾಂಗ್ವೊಂದು ಮೂವರು ಹಾಸ್ಟೆಲ್ ವಿದ್ಯಾರ್ಥಿಗಳ ಹೊಟ್ಟೆ, ಬೆನ್ನು, ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು, ಸ್ಥಳದಿಂದ ಪಾರಾಗಿದ್ದಾರೆ. ಆರೋಪಿ ಯುವಕರನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ. ವೈಯಕ್ತಿಕ ಕಾರಣದಿಂದ ಚಾಕು ಇರಿದಿದ್ದಾರೆ. ಗಾಂಜಾ ಮತ್ತಿನಲ್ಲಿ ಚಾಕು ಇರಿದಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.