ಕಲಬುರಗಿ: ಟಿಪ್ಪು ಸುಲ್ತಾನ್ ಈ ನೆಲದ ಧೀರ. ಆತನ ಕುರಿತಂತೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಪಠ್ಯ ಇರಬೇಕು ಎಂದಿರುವ ಎಂಎಲ್ಸಿ ಹೆಚ್. ವಿಶ್ವನಾಥ್ರಿಂದ ವಿವರಣೆ ಪಡೆಯುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ವಿಶ್ವನಾಥ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಆದರೆ, ಬಿಜೆಪಿ ಪಕ್ಷ ಟಿಪ್ಪು ಬಗ್ಗೆ ತನ್ನ ನಿಲುವು ಎಂದೂ ಬದಲಾಯಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪ ಅವರಂತಹ ನಾಯಕ ಕಾಂಗ್ರೆಸ್ನಲ್ಲಿ ಇಲ್ಲ. ಸಿಎಂ ಯಡಿಯೂರಪ್ಪ ದಕ್ಷರಿದ್ದಾರೆ. ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ಪುತ್ರ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಅನಗತ್ಯವಾಗಿ ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ. ಅನಗತ್ಯ ಗೊಂದಲ ಸೃಷ್ಟಿಸುವ ಕಾಂಗ್ರೆಸ್ ನಾಯಕರು ಬೆಂಕಿಯಲ್ಲಿ ಮೈಕಾಯಿಸಿಕೊಳ್ಳುತ್ತಾರೆ ಎಂದು ಕಟೀಲ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷ ವೃದ್ಧಾಶ್ರಮವಾಗುತ್ತಿದೆ. ಆ ಪಕ್ಷದವರಿಗೆ ಒಬ್ಬ ಅಧ್ಯಕ್ಷರನ್ನೂ ನೇಮಕ ಮಾಡಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.