ವಿಶ್ವ ಯೋಗ ದಿನ
ಮಂಗಳೂರು, ಜೂನ್ 21: ಇಂದು ಅಂತಾರಾಷ್ಟ್ರೀಯ ಯೋಗ ದಿನ. ಯೋಗ ಯುಜ್ ಎನ್ನುವ ಸಂಸ್ಕೃತ ಪದದಿಂದ ಬಂದಿದ್ದು, ಯೋಗ ಎಂದರೆ ಒಗ್ಗೂಡಿಸುವುದು ಎಂದರ್ಥ. ಯೋಗ ಜೀವಾತ್ಮವನ್ನು ಮತ್ತು ಪರಮಾತ್ಮನನ್ನು ಸೇರಿಸುವ ಸಾಧನ.
ಈ ಕೆಳಗಿನ ಶ್ಲೋಕದ ಪ್ರಾರ್ಥನೆಯೊಂದಿಗೆ ಯೋಗವನ್ನು ಪ್ರಾರಂಭಿಸಲಾಗುತ್ತದೆ.
ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ಚ ವೈದ್ಯಕೇನ
ಯೋಪಾ ಕರೋತ್ತಮ್ ಪ್ರವರಂ ಮುನೀನಾಂ
ಪತಂಜಲಿಂ ಪ್ರಾಜಂಲಿ ರಾನತೋಸ್ಮಿ
ಯೋಗ ಎನ್ನುವುದು ನಮ್ಮ ಮನಸ್ಸನ್ನು ಶಿಸ್ತಿಗೆ ಒಳಪಡಿಸುವ ರೀತಿಯಾಗಿದೆ. ಯೋಗ ಇಂದು ಭಾರತಕ್ಕೆ ಮಾತ್ರ ಸೀಮಿತ ವಾಗಿಲ್ಲ. ಭಾರತೀಯ ಯೋಗ ವಿದ್ಯೆಯ ವಿಶ್ವ ಮಾನ್ಯತೆಯನ್ನು ಮನಗಂಡ ವಿಶ್ವಸಂಸ್ಥೆ 2015ರಲ್ಲಿ ಜೂನ್ 21ಅನ್ನು ಅಂತಾರಾಷ್ಟ್ರೀಯ ಯೋಗದಿನವೆಂದು ಗುರುತಿಸಿತು.
ವಿಶ್ವದ 177 ರಾಷ್ಟ್ರಗಳು ಯೋಗಾಭ್ಯಾಸವನ್ನು ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಾಯಿತು. ವೇದಕಾಲದ ಋಷಿಗಳಿಂದ ಹುಟ್ಟಿ ಬೆಳೆದ ಯೋಗವು ಪತಂಜಲಿ ಮಹರ್ಷಿಗಳಿಂದ ಆರೋಗ್ಯ ಮತ್ತು ಆಧ್ಯಾತ್ಮ ವಿದ್ಯೆಯಾಗಿ ಪರಿಗಣಿಸಲ್ಪಟ್ಟು ವಿಶ್ವ ಮಾನ್ಯತೆ ಪಡೆದಿದೆ.
ಪತಂಜಲಿಯವರಿಗೆ ಯೋಗ ತತ್ವಜ್ಞಾನದ ಸ್ಥಾಪಕರೆಂದು ಗೌರವಿಸಲಾಗಿದೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಆರೋಗ್ಯಕರ ಬೆಳವಣಿಗೆಗಾಗಿ ದೈನಂದಿನ ಜೀವನದಲ್ಲಿ ಆರೋಗ್ಯವನ್ನು ಅಳವಡಿಸಲಾಗಿದೆ. ಬಹುತೇಕ ಜನರು ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮ ಎಂದಷ್ಟೇ ಭಾವಿಸಿದ್ದಾರೆ. ಆದರೆ ಯೋಗ ಎಂದರೆ ದೇಹ ಮತ್ತು ಮನಸ್ಸನ್ನು ಬೆಸೆಯುವ ಆಧ್ಯಾತ್ಮಿಕ ಪ್ರಕ್ರಿಯೆ.