Top News | ಬೆಂಗ್ಳೂರಲ್ಲಿ ಶಾಲೆ ಓಪನ್ : ಓದಿ ದಿನದ ಟಾಪ್ 5 ಸುದ್ದಿ today top news in kannada
ಕೊರೊನಾ ಸೋಂಕು ಕಡಿಮೆಯಾಗಲಿ ಅಥವಾ ಜಾಸ್ತಿಯಾಗಲಿ ಫೆಬ್ರವರಿ ಮೊದಲ ವಾರದಿಂದಲೇ ಬೆಂಗಳೂರಿನಲ್ಲಿ ಶಾಲೆಗಳು ಆರಂಭವಾಗುತ್ತವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಕಳೆದ ವಾರದ ಕೋವಿಡ್ ಸಂಬಂಧ ನಡೆದ ಸಭೆಯಲ್ಲಿ ಬೆಂಗಳೂರಿನಲ್ಲಿ ಶಾಲೆ ಆರಂಭಿಸುವ ಬಗ್ಗೆ ಚರ್ಚಿಸಲಾಗಿತ್ತು. ಈಗ ಬೆಂಗಳೂರಿನಲ್ಲಿ ಪ್ರತಿದಿನ ಕೋವಿಡ್ ಸಂಖ್ಯೆಯೂ ಕಡಿಮೆಯಾಗುತ್ತಿದ್ದು, ಹೀಗಾಗಿ ಶಾಲೆಗಳನ್ನು ಓಪನ್ ಮಾಡುವ ಸಾಧ್ಯತೆಗಳು ಜಾಸ್ತಿ ಇದೆ ಎಂದಿದ್ದಾರೆ.
ವಲಸಿಗರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಅನ್ನುವುದರ ಬಗ್ಗೆ ಸಚಿವ ಕೆ.ಸಿ.ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದು, ನಾವು ಮತ್ತೆ ಕಾಂಗ್ರೆಸ್ಗೆ ಹೋಗಲ್ಲ, ನಾವು ಯಾರೂ ಅವರ ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ.ನಾರಾಯಣಗೌಡ, ನಾವು ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಪಕ್ಷ ಸೇರೋದಿಲ್ಲ. ಯಡಿಯೂರಪ್ಪ ಅವರನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಬಿಜೆಪಿಯನ್ನ ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯನವರು ಸುಮ್ಮನೆ ಹುಳ ಬಿಡುವ ಕೆಲಸ ಮಾಡ್ತಿದ್ದಾರೆ. ಅದು ನಿಜವಾಗಿದ್ದರೆ, ಧೈರ್ಯವಿದ್ದರೆ ಹೆಸರು ಬಹಿರಂಗ ಪಡಿಸಿಲಿ ಎಂದು ವಿಪಕ್ಷ ನಾಯಕರಿಗೆ ಸವಾಲು ಹಾಕಿದರು.
ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ 873 ಅಂಕಗಳೊಂದಿಗೆ ಪಾಕಿಸ್ತಾನದ ನಾಯಕ ಬಾಬರ್ ಅಝಮ್ ಅಗ್ರಸ್ಥಾನದಲ್ಲಿದ್ದರೇ, 836 ಅಂಕಗಳೊಂದಿಗೆ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ.
ಐಸಿಸಿ ಟಿ 20 ಮಹಿಳಾ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾದ ಆಟಗಾರ್ತಿ ಶಫಾಲಿ ವರ್ಮಾ ಘರ್ಜಿಸಿದ್ದಾರೆ. ಇತ್ತೀಚೆಗೆ ಪ್ರಕಟವಾದ ಬ್ಯಾಟ್ಸ್‌ವುಮನ್ ಶ್ರೇಯಾಂಕದಲ್ಲಿ ಶಫಾಲಿ 726 ಅಂಕಗಳೊಂದಿಗೆ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಮತ್ತೊಬ್ಬ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ 709 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.