ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆ ದಿಢೀರ್ ಕುಸಿತಗೊಂಡಿದ್ದು, ರೈತರು ಹತಾಶರಾಗಿದ್ದಾರೆ. ಕಳೆದ ವಾರದ ಹಿಂದೆ 15 ಕೆ.ಜಿ. ಬಾಕ್ಸ್‌ಗೆ ₹700ರಿಂದ ₹800ರವರೆಗೆ ಇದ್ದ ಬೆಲೆ, ಈಗ ಅಕಸ್ಮಾತ್ ಕುಸಿದು ₹200ರಿಂದ ₹400ಕ್ಕೆ ಬಿದ್ದಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡಾ ಟೊಮೆಟೊ ಬೆಲೆ ಕೇವಲ ₹15ರಿಂದ ₹20 ರೂಪಾಯಿಗೆ ಇಳಿದಿದೆ. ಇದರ ಪರಿಣಾಮವಾಗಿ ಬೆಳೆದ ಟೊಮೆಟೊಗೆ ರೈತರಿಗೆ ಖರ್ಚು ತೀರಿಸಲು ಕೂಡಾ ಆಗದ ಸ್ಥಿತಿ ಎದುರಾಗಿದೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮಾರುಕಟ್ಟೆಗೆ ಹೆಚ್ಚಾಗಿ ಟೊಮೆಟೊ ಬಂದಿರುವುದು, ಬೆಲೆ ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಈ ಬೆಲೆ ಇಳಿಕೆಯಿಂದ ರೈತರು ಕಂಗಾಲಾಗಿದ್ದು, ಸರ್ಕಾರದಿಂದ ನೆರವು ನಿರೀಕ್ಷಿಸುತ್ತಿದ್ದಾರೆ.








