ಬೆಂಗಳೂರು: ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆ ಕಾಣುತ್ತಿದ್ದು, ಸಾಮಾನ್ಯ ಜನರು ಪರದಾಡುವಂತಾಗುತ್ತಿದೆ.
ಈರುಳ್ಳಿ, ಬೆಳ್ಳುಳ್ಳಿ ದರ ಗಗನಕ್ಕೆ ಏರಿಕೆಯಾಗಿದ್ದು, ಈ ಸಾಲಿಗೆ ಟೊಮೆಟೊ (Tomato) ಕೂಡ ಈಗ ಸೇರ್ಪಡೆಯಾಗಿದೆ. ಕಳೆದ ಕೆಲವು ದಿನಗಳಿಂದ ಈರುಳ್ಳಿ, ಬೆಳ್ಳುಳ್ಳಿ ದರಕ್ಕೆ ಜನ ಹೆದರುತ್ತಿದ್ದರು. ಈಗ ಟೊಮೆಟೂ ದರ ಕೂಡ ಸೆಂಚೂರಿ ಬಾರಿಸಿದ್ದು, ಜನ ಆತಂಕ ಪಡುವಂತಾಗಿದೆ. ಬೆಳ್ಳುಳ್ಳಿ ಕೆಜಿಗೆ 400 ರೂ. ದಾಟಿದ್ದರೆ, ಈರುಳ್ಳಿ 100 ರೂ. ಸನಿಹಕ್ಕೆ ಬಂದಿದೆ. ಈ ನಡುವೆ ಟೊಮೆಟೊ ಕೂಡ 100ರೂ. ಗಿಂತ ಅದಿಕವಾಗಿದೆ.
ಈ ವರ್ಷದ ಆರಂಭದಲ್ಲಿ ಮಳೆಯ ಅಭಾವದಿಂದಾಗಿ ಟೊಮೆಟೋ ದರ ಏರಿಕೆಯಾಗಿತ್ತು. ಆನಂತರ ಮತ್ತೆ ದರ ಸಾಮಾನ್ಯ ಸ್ಥಿತಿಗೆ ಬಂದಿತ್ತು. ಈಗ ಮತ್ತೆ ಟೊಮೆಟೋಗೆ ಚಿನ್ನದ ಬೆಲೆ ಬಂದಂತಾಗಿದೆ. ಹಬ್ಬದ ಈ ಸಂದರ್ಭದಲ್ಲಿ ಟೊಮೆಟೋ ದರ ಏರಿಕೆಯಾಗಿದ್ದಕ್ಕೆ ಹೋಟೆಲ್ ಉದ್ಯಮ ಸೇರಿದಂತೆ ಗೃಹಸ್ಥರು ಕಂಗಾಲಾಗಿದ್ದಾರೆ.
ಬೆಂಗಳೂರಿಗೆ (Bengaluru) ಸರಬರಾಜು ಆಗುತ್ತಿದ್ದ ಟೊಮೆಟೊದಲ್ಲಿ ಭಾರೀ ಇಳಿಕೆ ಕಂಡಿದೆ. ಬೆಂಗಳೂರಿನ ಕೆಲವು ಭಾಗಗಳಿಂದ ಮಾತ್ರ ಟೊಮೆಟೊ ಬರುತ್ತಿದ್ದು, ಸಂಪೂರ್ಣ ಪೂರೈಕೆ ಆಗುತ್ತಿಲ್ಲ. ಹೀಗಾಗಿ ದರ ಏರಿಕೆ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.








