ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ನಾಳೆ ಶಿಲಾನ್ಯಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಸೆಲ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಗೃಹ ಸಚಿವರ ಸೂಚನೆ ಮೇರೆಗೆ ದಕ್ಷಿಣ ಕನ್ನಡ, ಕಲಬುರಗಿ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಆಯುಕ್ತರ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬೊಮ್ಮಾಯಿ, ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಮೂಲಕ ನಿಗಾ ವಹಿಸುವಂತೆ ಆದೇಶ ನೀಡಿದ್ದಾರೆ.
ದೇವಸ್ಥಾನ, ಪ್ರಾರ್ಥನಾ ಮಂದಿರಗಳಿಗೆ ಬಂದೋಬಸ್ತ್ ಒದಗಿಸಲು ಸೂಚಿಸಲಾಗಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಚಾಮರಾಜನಗರ, ಮಡಿಕೇರಿ, ಕೋಲಾರ ಹಾಗೂ ಗಡಿ ಜಿಲ್ಲೆಗಳ ಚೆಕ್‍ಪೋಸ್ಟ್‍ಗಳಲ್ಲೂ ಬಂದೋಬಸ್ತ್ ಮಾಡಬೇಕು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
ರಾಮಜನ್ಮ ಭೂಮಿ ಕುರಿತಂತೆ ಯಾರೂ ವಿವಾದಾತ್ಮಕ ಹೇಳಿಕೆ ನೀಡಬಾರದು. ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಕೊರೊನಾ ಹರಡುವ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಪೂಜೆ ನಡೆಸಬಹುದು. ಆದರೆ, ದೇವಸ್ಥಾನಗಳಲ್ಲಿ 5ಕ್ಕಿಂತ ಹೆಚ್ಚು ಜನರು ಸೇರಬಾರದು.
ಜತೆಗೆ ಪ್ರತಿಭಟನೆ, ವಿಜಯೋತ್ಸವಕ್ಕೆ ಅವಕಾಶ ನೀಡಬಾರದು. ಈ ಸಂಬಂಧ ನಿಷೇಧಾಜ್ಞೆ ಹೊರಡಿಬೇಕು ಎಂದು ಸೂಚಿಸಿದ್ದಾರೆ.
ಫೇಸ್‍ಬುಕ್, ವಾಟ್ಸ್‍ಆಪ್‍ಗಳ ಮೇಲೆ ಕಣ್ಣಿಡಲಾಗುವುದು. ಆಕ್ಷೇಪಾರ್ಹ ಹಾಗೂ ಪ್ರಚೋದನಾಕಾರಿ ಮಾಹಿತಿ ಪ್ರಕಟಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕಾನೂನು ಉಲ್ಲಂಘಿಸಿದರೆ ಗೂಂಡಾಕಾಯ್ದೆ ಹಾಕಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.








