ರಾಜ್ಯದಲ್ಲಿ 8906 ಕೊರೊನಾ ಕೇಸ್ ಗಳು
ರಾಜ್ಯದಲ್ಲಿ ಇಂದು ಕೂಡ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದೆ. ಇಂದು ರಾಜ್ಯದಾದ್ಯಂತ 8906 ಕೇಸ್ ಗಳು ಪತ್ತೆಯಾಗಿವೆ. ನಾಲ್ಕು ಮಂದಿ ಹೆಮ್ಮಾರಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5.42ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 7113 ಕೇಸ್ ಗಳು ಪತ್ತೆಯಾಗಿವೆ.
ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೂ ರಾಜ್ಯದಲ್ಲಿ ಕರ್ಫ್ಯೂ ಇರಲಿದೆ. ಈ ವೇಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ರೆ ರಾಜ್ಯದ ಹಲವು ಜಿಲ್ಲೆಗಳಿಗೆ ಈ ವೀಕೆಂಡ್ ಕರ್ಫ್ಯೂಗೆ ಜನರು ಕ್ಯಾರೆ ಎನ್ನುತ್ತಿಲ್ಲ. ಮಂಡ್ಯ, ಮೈಸೂರು, ಮದ್ದೂರು, ಚಿಕ್ಕಬಳ್ಳಾಪುರದಲ್ಲಿ ಜನ ಜೀವನ ಎಂದಿನಂತೆ ಇತ್ತು.
ಕೊರೊನಾಗೆ ಭಾರತದಲ್ಲಿ 32 ಲಕ್ಷ ಮಂದಿ ಬಲಿ
ಕೊರೊನಾ ಮೂರನೇ ಅಲೆ ದೇಶದಲ್ಲಿ ಈಗಾಗಲೇ ಆರ್ಭಟಿಸಲು ಶುರು ಮಾಡಿದೆ. ಈ ಮಧ್ಯೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದ್ದು, ಕೊರೊನಾ ವೈರಸ್ ಗೆ ಭಾರತದಲ್ಲಿ 32 ಲಕ್ಷ ಮಂದಿ ಬಲಿಯಾಗಿದ್ದಾರೆ ಎಂದು ಅಧ್ಯಯನವೊಂದು ಪ್ರಕಟಿಸಿದೆ. ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿ ಈವರೆಗೆ 4,83,178 ಜನರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ಆದ್ರೆ ‘ಸೈನ್ಸ್’ ಜರ್ನಲ್ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಸುಮಾರು 3.2 ಮಿಲಿಯನ್ ಸೋಂಕಿತರು ಭಾರತದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದೆ.
ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ
ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಪಂಜಾಬ್, ಗೋವಾ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ ವಾಗಿದೆ. 5 ರಾಜ್ಯಗಳಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 14ರಂದು ಪಂಜಾಬ್, ಗೋವಾ, ಉತ್ತರಾಖಂಡ್ನಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದ 403 ಕ್ಷೇತ್ರಗಳಿಗೆ 7ಹಂತದಲ್ಲಿ ಮತದಾನ ನಡೆಯಲಿದೆ. ಮಣಿಪುರದ 60 ಕ್ಷೇತ್ರಗಳಿಗೆ 2 ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 27ರಂದು ಮೊದಲ ಹಂತದ ಮತದಾನ, ಮಾರ್ಚ್ 3ರಂದು 2ನೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಸುಧಾಕರ್ ವ್ಯಂಗ್ಯ
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಆರೋಗ್ಯ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಅವರು ರೈಲಿನಲ್ಲಾದರೂ ಹೋಗಲಿ, ಬಸ್ನಲ್ಲಾದರೂ ಹೋಗಲಿ, ಟ್ರೆಕ್ಕಿಂಗ್ ಮಾಡಲಿ. ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು. ಮಾಡುವುದನ್ನು ಮಾಡಲಿ, ಸಮಯ ನೋಡಿ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
‘ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡೇ ಪಾದಯಾತ್ರೆ ಮಾಡುತ್ತೇವೆ’
ನಾವು ಕೋವಿಡ್ -19 ನಿಯಮಗಳನ್ನು ಪಾಲಿಸಿಕೊಂಡೇ ಪಾದಯಾತ್ರೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ನಾಳೆ ಪಾದಯಾತ್ರೆ ಆರಂಭಿಸಿಲಿದೆ. ಈ ಮಧ್ಯೆ ರಾಜ್ಯ ಸರ್ಕಾರ ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಮನಗರಕ್ಕೆ ನಿಷೇಧಾಜ್ಞೆ ಜಾರಿ ಮಾಡಿದೆ. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಯಾಕೆ ರಾಮನಗರಕ್ಕೆ ಮಾತ್ರ ನಿಷೇಧಾಜ್ಞೆ ಹಾಕಿದ್ದಾರೆ. ಅದರ ಅರ್ಥ ಏನು ಎಂದು ಪ್ರಶ್ನಿಸಿದ್ದಾರೆ.
‘ಕೆಜಿಎಫ್: ಚಾಪ್ಟರ್ 2’ ಹೊಸ ಪೋಸ್ಟರ್
ಯಶ್ ಜನ್ಮದಿನದ ಪ್ರಯುಕ್ತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಿಂದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಬೆಳಗ್ಗೆ 9 ಗಂಟೆಗೆ ಪೋಸ್ಟರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಒಂದು ದಿನ ಮುಂಚಿತವಾಗಿ ಘೋಷಿಸಿತ್ತು. ಅದರಂತೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಅಲ್ಲದೆ #KGF2onApr14 ಎಂಬ ಹ್ಯಾಶ್ ಟ್ಯಾಗ್ ಬಳಸಿದೆ. ಆ ಮೂಲಕ ರಿಲೀಸ್ ದಿನಾಂಕದಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಖಚಿತಪಡಿಸಿದೆ.
‘ಕಟ್ಟಪ್ಪ’ಗೆ ಕೊರೊನಾ ಪಾಸಿಟಿವ್
ಚನೈ: ಕಾಲಿವುಡ್ ನ ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪಾತ್ರ ಬಹಳಷ್ಟು ಪ್ರಖ್ಯಾತಿ ಪಡೆದಿತ್ತು. ಈ ಪಾತ್ರವನ್ನು ನಿರ್ವಹಿಸದ ಕಾಲಿವುಡ್ ಸ್ಟಾರ್ ನಟ ಸತ್ಯರಾಜ್ ಗೆ ಕೊರೊನಾ ಪಾಸಿಟಿವ್ ಬಂದಿದ್ದು ಇದೀಗ ಅವರನ್ನು ಚೆನ್ನೈನ ಅಮಿಂಜಿಕ್ಕರೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ತಿಳಿದು ಬಂದಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜು
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಕೇಪ್ ಟೌನ್ ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಸಿದ್ಧತೆ ಮಾಡಿಕೊಂಡಿದೆ. ಗಾಯದ ಸಮಸ್ಯೆಯಿಂದ 2ನೇ ಟೆಸ್ಟ್ ನಿಂದ ದೂರ ಇದ್ದ ವಿರಾಟ್ ಮತ್ತೆ ತಂಡಕ್ಕೆ ವಾಪಸ್ ಆಗಲಿದ್ದಾರೆ. ಸಿರಾಜ್ ಬದಲು ಉಮೇಶ್ ಯಾದವ್ ಕಣಕ್ಕಿಳಿಯಲಿದ್ದಾರೆ. ವೀಕೆಟ್ ಕೀಪರ್ ಪಂತ್ ಸ್ಥಾನಕ್ಕೆ ಸಹಾ ಆಯ್ಕೆ ಆಗುವ ಸಾಧ್ಯತೆಗಳಿವೆ.