ಮಂಡ್ಯ: ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ದೋಸ್ತಿ ಪಾದಯಾತ್ರೆ (BJP JDS Padayatra) ನಡೆಸುತ್ತಿದೆ. ಇದಕ್ಕೆ ಕೌಂಟರ್ ನೀಡುವುದಕ್ಕಾಗಿ ಕಾಂಗ್ರೆಸ್ ಸೋಮವಾರದಿಂದ ಎರಡು ದಿನಗಳ ಕಾಲ ಜನಾಂದೋಲನ ಆರಂಭಿಸಿದೆ. ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಜನಾಂದೋಲನ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಕಾಂಗ್ರೆಸ್ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರ ಮಾತನಾಡಿ, ದೋಸ್ತಿ ವಿರುದ್ಧ ಗುಡುಗಿದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar), ಸಿದ್ದರಾಮಯ್ಯ ಯಾವ ತಪ್ಪನ್ನೂ ಮಾಡಿಲ್ಲ. ಅವರನ್ನು ಮುಟ್ಟಲು ನಿಮ್ಮ ಹಣೆಬರಹದಲ್ಲಿ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ 2ನೇ ಬಾರಿಗೆ ಸಿಎಂ ಆಗಿದ್ದನ್ನು ನಿಮಗೆ ಸಹಿಸಲು ಆಗುತ್ತಿಲ್ಲ. ಅವರು ಸರ್ಕಾರದ ಜಮೀನು ಮುಟ್ಟಿಲ್ಲ. ಸರ್ಕಾರವೇ ಅವರ ಜಾಗ ಪಡೆದು ಬೇರೆ ಜಾಗ ಕೊಟ್ಟಿದೆ ಎಂದು ಗುಡುಗಿದ್ದಾರೆ.
ಮೊದಲು ನಿಮ್ಮ ಸರ್ಕಾರದ ಅವಧಿಯಲ್ಲಿ ಆದ ಹಗರಣಗಳ ಬಗ್ಗೆ ಉತ್ತರ ಕೊಡಿ. ಆದರೆ, ಬಿಜೆಪಿ ಸರ್ಕಾರದಲ್ಲಾದ ಹಗರಣಗಳ ಬಗ್ಗೆ ಮೊದಲು ಉತ್ತರ ಕೊಡಿ. ಆನಂತರ ಪಾದಯಾತ್ರೆ ಮಾಡಿ. ಪಂಚ ಗ್ಯಾರಂಟಿ ಜಾರಿಗೆ ತಂದು ರಾಜ್ಯದ ಅಭಿವೃದ್ಧಿ ಮಾಡುತ್ತಿರುವ ಸರ್ಕಾರ ನಮ್ಮದು. ವಿದ್ಯುತ್ ಉಚಿತ ಮಾಡಿದ್ದೇವೆ. ನಮ್ಮದು 10 ತಿಂಗಳ ಸರ್ಕಾರ ಅಲ್ಲ. 10 ವರ್ಷದ ಸರ್ಕಾರ ಎಂದು ಹೇಳಿದ್ದಾರೆ.