ಬೆಂಗಳೂರು : ಪಾದರಾಯನಪುರದ ಪುಂಡರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿದ ಕುರಿತಂತೆ ಆರೋಪ ಕೇಳಿಬರುತ್ತಿದೆ. ಒಂದು ವೇಳೆ, ಆರೋಪಿಗಳನ್ನು ಆಸ್ಪತ್ರೆಯಲ್ಲೇ ಇರಿಸಿದ್ದರೂ ಆರೋಪ ಬರುತ್ತಿತ್ತು. ಅವರನ್ನು ಎಲ್ಲೇ ಇರಿಸಿದ್ದರೂ ಆರೋಪಗಳು ಬರುತ್ತಿದ್ದವು. ಈ ಕುರಿತಂತೆ ಆರೋಪ ಮಾಡುವ ಸಮಯ ಇದಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರ ಆರೋಪಿಗಳಿಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಎಲ್ಲ ಆರೋಪಿಗಳನ್ನು ಸ್ಥಳಾಂತರ ಮಾಡುವ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಆರೋಪಿಗಳನ್ನು ಎಲ್ಲಿಯೇ ಇರಿಸಿದ್ದರೂ ಆರೋಪ ಕೇಳಿಬರುತ್ತಿತ್ತು. ಪೊಲೀಸ್ ಅಧಿಕಾರಿಗಳು ಇದನ್ನೆಲ್ಲ ಸಮಯ, ಸಂದರ್ಭ ನೋಡಿಕೊಂಡು ನಿರ್ಧರಿಸುತ್ತಾರೆ. ಜೈಲಿಗೆ ಸ್ಥಳಾಂತರ ಮಾಡಿದ ಬಳಿಕ ಏನಾದರೂ ಆರೋಪಿಗಳಲ್ಲಿ ಸೋಂಕು ಕಂಡುಬಂದರೆ ಅವರನ್ನು ಅಲ್ಲಿಂದ ಶಿಫ್ಟ್ ಮಾಡಲು ಮೊದಲೇ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ತಿಳಿಸಲಾಗಿತ್ತು. ಈಗ ಜೈಲಿನಲ್ಲಿರುವ ಎಲ್ಲರನ್ನು ತಪಾಸಣೆ ಮಾಡಲಾಗುತ್ತದೆ. ಅಲ್ಲದೇ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಹೀಗಾಗಿ ರಾಮನಗರದ ಜನತೆ ಆತಂಕ ಪಡುವುದು ಬೇಡ. ಪಾದರಾಯನಪುರದ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದರಲ್ಲಿ ತಪ್ಪಿಲ್ಲ ಎಂದರು.








