Hunger strike | ಸಾರಿಗೆ ನೌಕರರಿಂದ ಉಪವಾಸ ಸತ್ಯಾಗ್ರಹ!?
ಮಾರ್ಚ್.28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ರಾ.ರ.ಸಾ.ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿಕೆ
ಸಾರಿಗೆ ಸಚಿವ ಶ್ರೀರಾಮುಲು ಅವರ ನಿವಾಸದ ಬಳಿ ಸತ್ಯಾಗ್ರಹ
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹ
ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 28 ರಿಂದ ರಾಜ್ಯ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಮುಂದಾಗಿದ್ದಾರೆ.
ಈ ಬಗ್ಗೆ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ನಗರದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
2021ರ ಏಪ್ರಿಲ್ 7ರಂದು ನಡೆದ ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿದ್ದ ನಾಲ್ಕೂ ನಿಗಮಗಳಲ್ಲಿ ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಹಾಗೂ ಅಮಾನತು ಮಾಡಿ ನೂರಾರು ನೌಕರರ ವಿರುದ್ಧ ಸುಳ್ಳು ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮೊದಲು ಇದನ್ನ ಸರಿಪಡಿಸಬೇಕು. 2021ರ ಏಪ್ರಿಲ್ .6 ರಂದು ಇದ್ದ ಸ್ಥಿತಿಯಲ್ಲಿ ನೌಕರರಿಗೆ ಸೇವೆ ನೀಡಬೇಕು. ಜೊತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿದರು.
ನೌಕರರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದ್ರೆ ಪೂರ್ಣವಾಗಿ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಹೀಗಾಗಿ ಇದೇ ಮಾರ್ಚ್ 28 ರಿಂದ ಸಾರಿಗೆ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಸಾರಿಗೆ ಸಚಿವ ಶ್ರೀರಾಮುಲು ಅವರ ಬಳ್ಳಾರಿ ನಿವಾಸದ ಬಳಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.
ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಉಪವಾಸ ಸತ್ಯಾಗ್ರಹವೊಂದೇ ಮಾರ್ಗವೆಂದು ತೀರ್ಮಾನಿಸಿದ್ದೇವೆ. ಸತ್ಯಾಗ್ರಹದ ವೇಳೆ ಅಸುನೀಗಿದರೂ ಸರಿ.
ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿ ಕೊಡುವವರೆಗೂ ಹೋರಾಟ ವಾಪಸ್ ಪಡೆಯುವುದಿಲ್ಲ ಎಂದು ಚಂದ್ರಶೇಖರ್ ತಿಳಿಸಿದರು.
Transport employees to hold hunger strike against Govt