ಅಗರ್ತಲಾ: ದೇಶದ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ತ್ರಿಪುರಾದಲ್ಲಿ (Tripura Flood) ನಿರಂತರ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುವ ಕಾರ್ಯಾಚರಣೆ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್ಆರ್) ಯೋಧ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ತ್ರಿಪುರಾ ಜಿಲ್ಲೆಯ ಬೆಲೋನಿಯಾದ ಟಿಎಸ್ಆರ್ ಜವಾನ್ ಆಶಿಶ್ ಬೋಸ್ ಮತ್ತು ಪಶ್ಚಿಮ ತ್ರಿಪುರಾ ಜಿಲ್ಲೆಯ ಇಂದ್ರನಗರದ ಚಿರಂಜಿತ್ ಡೇ ಬಲಿಯಾದ ಯೋಧರು.
ತ್ರಿಪುರಾದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿಯವರೆಗೆ 24 ಜನ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.
ಇಬ್ಬರು ನಾಪತ್ತೆಯಾಗಿದ್ದು, ರಾಜ್ಯದಾದ್ಯಂತ 558 ಪರಿಹಾರ ಶಿಬಿರಗಳಲ್ಲಿ ಸುಮಾರು 1.28 ಲಕ್ಷ ಜನರು ಆಶ್ರಯ ಪಡೆಯುತ್ತಿದ್ದಾರೆ.ತ್ರಿಪುರಾ ಪ್ರವಾಹಕ್ಕೆ ಸಿಲುಕಿದವರ ರಕ್ಷಿಸುವ ಸಂದರ್ಭದಲ್ಲಿ ಇಬ್ಬರು ವೀರ ಯೋಧರಾದ ಆಶಿಶ್ ಬೋಸ್ ಮತ್ತು ಚಿರಂಜಿತ್ ಡೇ ಪ್ರಾಣ ತ್ಯಾಗ ಮಾಡಿದ್ದಾರೆ. ಅಗಲಿಕೆಯಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ಅವರ ನಿಸ್ವಾರ್ಥ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಸಿಎಂ ಮಾಣಿಕ್ ಸಹಾ ಸಾಮಾಜಿಕ ಜಾಲತಾಣದ ಮೂಲಕ ಬರೆದುಕೊಂಡಿದ್ದಾರೆ.
ಎಲ್ಲ ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಕೆಳಗಿಳಿದಿದೆ. ರಾಜ್ಯಾದ್ಯಂತ ಪ್ರವಾಹದಿಂದಾಗಿ ಸುಮಾರು 5 ಸಾವಿರ ಕೋಟಿ ರೂ. ನಷ್ಟು ನಷ್ಟವಾಗಿದೆ ಎಂದು ವರದಿಯಾಗಿದೆ.