ನವದೆಹಲಿ: ಅಬಕಾರಿ ನೀತಿಯಲ್ಲಿ ಜೈಲು ಪಾಲಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ (Arvind Kejriwal) ಜಾಮೀನು (Bail) ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.
ಅರವಿಂದ್ ಕೇಜ್ರಿವಾಲ್, ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಂತರ ಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿತು. ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಸೆಕ್ಷನ್ 45ರ ಕಠಿಣತೆಯ ಹೊರತಾಗಿಯೂ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದಿದ್ದಾರೆ ಎಂದು ಇಡಿ ಪ್ರಕರಣ ಉಲ್ಲೇಖಿಸಿದ್ದಾರೆ.
ಪಿಎಂಎಲ್ಎಯ ಕಟ್ಟುನಿಟ್ಟಿನ ನಿಬಂಧನೆಗಳ ಅಡಿಯಲ್ಲಿ ಕೇಜ್ರಿವಾಲ್ ಜಾಮೀನು ಪಡೆದಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯು ಮನಿ ಲಾಂಡರಿಂಗ್ ಕಾನೂನಿನಂತೆ ಕಠಿಣ ಷರತ್ತುಗಳನ್ನು ಹೊಂದಿಲ್ಲದ ಕಾರಣ ಸಿಬಿಐ ಪ್ರಕರಣದಲ್ಲಿ ಸಾಮಾನ್ಯ ಜಾಮೀನನ್ನು ಹೇಗೆ ನಿರಾಕರಿಸಬಹುದು ಎಂದು ಸಿಂಘ್ವಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನ್ಯಾ.ಸೂರ್ಯಕಾಂತ್, ನಾವು ಯಾವುದೇ ಮಧ್ಯಂತರ ಜಾಮೀನು ನೀಡುತ್ತಿಲ್ಲ. ಸಿಬಿಐಗೆ ನೋಟಿಸ್ ನೀಡುತ್ತಿದ್ದೇವೆ. ಅಗಸ್ಟ್ 23ರ ಒಳಗೆ ಅವರು ಪ್ರತಿಕ್ರಿಯೆ ನೀಡಲಿ ಎಂದು ವಿಚಾರಣೆ ಮುಂದೂಡಿದರು.