ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಕಾಂಗ್ರೆಸ್ ಕಾರ್ಪೊರೇಟರ್‌ಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರುವ ವಿಚಾರವಾಗಿ ಸಚಿವ ಸುಧಾಕರ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲ ಟ್ವೀಟ್ ನಲ್ಲಿ, ‘ತನುವಿನ ಕೋಪ ತನ್ನ ಹಿರಿಯತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ ” ಎಂದು, ಬೆಂಗಳೂರು ಗಲಭೆ ಕಾರಣ ಯಾರು? ಎಂಬ ಸತ್ಯ ಹೊರ ಬರುತ್ತಿದೆ. ಕಾಂಗ್ರೆಸ್ ಕಾರ್ಪೊರೇಟರ್‌ಗಳ ಸಂಪತ್ ರಾಜ್, ಜಾಕೀರ್ ಅವರು ಇಂದು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, “ಕನಿಷ್ಠಪಕ್ಷ ಸತ್ಯಗಳನ್ನು ಗಟ್ಟಿಯಾಗಿ ಹೇಳುವ ಧೈರ್ಯ ಇಲ್ಲದ ಕಾಂಗ್ರೆಸ್ ನಾಯಕರಿಗೆ ಅದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರಿಗೆ ಕಾಂಗ್ರೆಸ್ ನಾಯಕರಿಂದ ನ್ಯಾಯ ಸಿಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಹಾಗೇ ಈ ಜಗತ್ತಿನಲ್ಲಿ ಚಿರಕಾಲ ಉಳಿಯುವಂಥದ್ದು ನಯ-ವಿನಯವೇ ಹೊರತು ಮೃಗೀಯತೆಯೂ ಅಲ್ಲ, ದೇಹಬಲವೂ ಅಲ್ಲ. ಸತ್ಯಕ್ಕೆ ಸಾವಿಲ್ಲ” ಎಂದು ಕಾಂಗ್ರೆಸ್ ಗೆ ಕುಟುಕಿದ್ದಾರೆ.








