ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆ
ಟೊಂಗಾ: ಪೆಸಿಫಿಕ್ ಸಾಗರದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡು ಬೃಹತ್ ಅಲೆಗಳು ಎದ್ದ ಪರಿಣಾಮ ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಟೊಂಗಾ ನ್ಯೂಜಿಲೆಂಡ್ ಹಾಗೂ ಅಮೆರಿಕಾದ ಕೆಲವು ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದೊಳಗಿನ ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಬೃಹತ್ ಅಲೆಗಳು ಟೊಂಗಾಗೆ ಅಪ್ಪಳಿಸಿದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶನಿವಾರದಂದು ನೀರೊಳಗಿನ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಜೊತೆಗೆ ಈ ಪ್ರದೇಶದಲ್ಲಿ ಭಾರೀ ಗುಡುಗು ಸಹಿತ ಮಳೆಯಾಗಿದೆ.
ಸ್ಪೋಟಗೊಂಡಾಗ ಸಮುದ್ರದಿಂದ ದಟ್ಟವಾದ ಹೊಗೆ ಎದ್ದಿದೆ. ಸಮುದ್ರದಲ್ಲಿ ಎದ್ದ ಅಲೆಗಳು ಸಮೀಪದ ಹಳ್ಳಿಗಳಿಗೆ ಬಂದು ಬಡಿದು, ಸುತ್ತಲಿನ ಪ್ರದೇಶಗಳು ಮೊಣಕಾಲು ಆಳದ ನೀರಿನಿಂದ ಆವೃತವಾಗಿವೆ. ಜ್ವಾಲಾಮುಖಿ ಸ್ಫೋಟದಿಂದಾಗಿ ಉದ್ಬವಿಸಿದ ಬೂದಿ, ಹಬೆ ಮತ್ತು ಅನಿಲ 20 ಕಿಲೋಮೀಟರ್‌ಗಳಷ್ಟು ದೂರದವರೆಗೆ ಗಾಳಿಯಲ್ಲಿ ಹರಡಿದೆ. ಸ್ಥಳೀಯ ಮಾಧ್ಯಮವೊಂದು , ಈ ಸ್ಫೋಟವು ಕಳೆದ ವರ್ಷ ಡಿಸೆಂಬರ್ 20 ರಂದು ಸಂಭವಿಸಿದ ಸ್ಫೋಟಕ್ಕಿಂತ ಏಳು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು ಎಂದು ಹೇಳಿದೆ.








