ಬೆಂಗಳೂರು: ಯುವತಿಯ ಬಟ್ಟೆ ಎಳೆದ ವ್ಯಕ್ತಿಯನ್ನು ಬರೋಬ್ಬರಿ 500 ಕ್ಯಾಮೆರಾ ಸರ್ಚ್ ಮಾಡಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಸೌತ್ ಎಂಡ್ ಬಳಿಯ ಡಿಸಿಪಿ ಕಚೇರಿ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸಿಗ್ನಲ್ ಹತ್ತಿರ ಯುವತಿಯೊಬ್ಬರು ಬೈಕ್ ನಿಲ್ಲಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಿಗ್ನಲ್ ಬಿಟ್ಟ ಸಂದರ್ಭದಲ್ಲಿ ಪರಸ್ಪರ ಬೈಕ್ ಸಣ್ಣದಾಗಿ ಟಚ್ ಆಗಿತ್ತು. ಆಗ ಮುಂದೆ ಹೋಗುತ್ತಿದ್ದ ಯುವತಿಯ ಬೈಕ್ ಅಡ್ಡಗಟ್ಟಿ ಬೈಕ್ ಸವಾರ ಹರೀಶ್, ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಅವಾಚ್ಯವಾಗಿ ನಿಂದಿಸಿ ಪರಾರಿಯಾಗಿದ್ದ.
ಡಿಸಿಪಿ ಕಚೇರಿ ಮುಂದೆಯೇ ಯುವತಿ ಬಟ್ಟೆ ಎಳೆದಾಡಿದ ವಿಚಾರ ಸಾರ್ವಜನಿಕರನ್ನೇ ತಬ್ಬಿಬ್ಬು ಮಾಡಿತ್ತು. ಜಯನಗರ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ದೂರು ದಾಖಲಿಸಿಕೊಂಡಿದ್ದರು. ಆದರೆ, ಆರೋಪಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಸುಮಾರು 500 ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬಿನ್ನಿಪೇಟೆಗೆ ಕರೆದುಕೊಂಡು ಹೋಗಿತ್ತು. ಹರೀಶ್ ಮನೆ ಪತ್ತೆ ಮಾಡಿದ ಪೊಲೀಸರು ಆರಾಮಾಗಿ ಟಿವಿ ನೋಡುತ್ತಿದ್ದ ಆರೋಪಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.