ಮಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಡ್ರಗ್ಸ್ ಜಾಲದ ತನಿಖೆ ಕರಾವಳಿಯಲ್ಲೂ ಭಾರಿ ಸಂಚಲನ ಮೂಡಿಸಿದೆ.
ಡ್ರಗ್ಸ್ ಪ್ರಕರಣದ ತನಿಖೆ ಈಗಷ್ಟೇ ಆರಂಭವಾಗಿದ್ದು, ಡ್ರಗ್ಸ್ ಕೇಸ್‍ನ ತನಿಖೆ ನಡೆಸುತ್ತಿರುವ ಮಂಗಳೂರು ಸಿಸಿಬಿ ತಂಡದ ತನಿಖಾಧಿಕಾರಿಯನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ.
ಸಿಸಿಬಿ ತನಿಖಾಧಿಕಾರಿಯಾಗಿದ್ದ ಶಿವಪ್ರಕಾಶ್ ನಾಯ್ಕ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಶಿವಪ್ರಕಾಶ್ ವರ್ಗಾವಣೆಗೆ ರಾಜಕೀಯ ಒತ್ತಡ ಅದರಲ್ಲೂ ಮಂಗಳೂರಿನ ಪ್ರಭಾವಿ ಶಾಸಕರ ಒತ್ತಡವೇ ಕಾರಣ ಎಂಬ ಗುಸು ಗುಸು ಕೇಳಿ ಬರುತ್ತಿದೆ.
ಡ್ರಗ್ಸ್ ಕೇಸಲ್ಲಿ ಅರೆಸ್ಟ್ ಆಗಿರುವ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿಗೆ ಜೈಲಿನ ದಾರಿ ತೋರಿಸಿದವರೇ ಇದೇ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ನಾಯ್ಕ್. ಹೀಗಾಗಿ ಕಿಶೋರ್ ಶೆಟ್ಟಿ ಅರೆಸ್ಟ್ ಆದ ದಿನದಿಂದಲೇ ಆ ಪ್ರಭಾವಿ ಶಾಸಕ ಸಿಸಿಬಿ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ಮೇಲೆ ಒತ್ತಡ ಹೇರಲು ಆರಂಭಿಸಿದ್ದರಂತೆ. ಕಿಶೋರ್ ಶೆಟ್ಟಿಯನ್ನು ಅರೆಸ್ಟ್ ಮಾಡಬೇಡ, ವಿಚಾರಣೆ ನಡೆಸಿ ಬಿಟ್ಟು ಕಳಿಸಬೇಕು. ಪ್ರಕರಣದಿಂದ ಆತನನ್ನು ಕೈಬಿಡುವಂತೆ ಪ್ರಭಾವಿ ಶಾಸಕ ಒತ್ತಡ ಹೇರುತ್ತಿದ್ದರಂತೆ.
ಶಾಸಕರ ಒತ್ತಡಕ್ಕೆ ಮಣಿಯದ ಶಿವಪ್ರಕಾಶ್ ನಾಯ್ಕ್, ಕಿಶೋರ್ ಶೆಟ್ಟಿಯನ್ನು ಡ್ರಗ್ಸ್ ಕೇಸಲ್ಲಿ ಫಿಟ್ ಮಾಡಿದ್ದೂ ಅಲ್ಲದೆ, ಆತನ ಡ್ರಗ್ಸ್ ನೆಟ್‍ವರ್ಕನ್ನೇ ಜಾಲಾಡಲು ಆರಂಭಿಸಿದ್ದಾರೆ.
ಕಿಶೋರ್ ಶೆಟ್ಟಿ ನೆಟ್‍ವರ್ಕ್‍ನಲ್ಲಿದ್ದ ಅನುಶ್ರೀಗೂ ಈ ಪ್ರಕರಣ ಕಂಟಕ ತಂದಿದ್ದರೆ, ಕೊರಿಯೋಗ್ರಾಫರ್, ಮಸಾಜ್ ಪಾರ್ಲರ್ ಯುವತಿ ಸೇರಿದಂತೆ ಹಲವನ್ನು ಸಿಸಿಬಿ ಪೊಲೀಸರು ಡ್ರಗ್ಸ್ ಕೇಸಲ್ಲಿ ಅರೆಸ್ಟ್ ಮಾಡಿ ಜೈಲಿನ ಕಂಬಿ ಹಿಂದೆ ಕಳಿಸಿದ್ದಾರೆ.
ತನ್ನ ಮಾತನ್ನು ಕೇಳದೆ ಕಿಶೋರ್ ಶೆಟ್ಟಿಗೆ ಮುಳುವಾದರು ಎಂಬ ಕಾರಣಕ್ಕೆ ಸಿಸಿಬಿ ತನಿಖಾಧಿಖಾರಿ ಶಿವಪ್ರಕಾಶ್ ನಾಯ್ಕ್ ಅವರನ್ನೇ ಎತ್ತಂಗಡಿ ಮಾಡಿ ಪ್ರಭಾವಿ ಶಾಸಕ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಒಂದು ಗಂಭೀರ ಪ್ರಕರಣ, ಅದರಲ್ಲೂ ಡ್ರಗ್ಸ್ ಪ್ರಕರಣದ ತನಿಖೆ ನಡೆಯುತ್ತಿವಾಗ ತನಿಖಾಧಿಕಾರಿ ವರ್ಗಾವಣೆ ತನಿಖಾ ತಂಡದ ಉತ್ಸಾಹವನ್ನೇ ಕುಗ್ಗಿಸಿದಂತಾಗುತ್ತದೆ. ಈಗ ಶಿವಪ್ರಕಾಶ್ ನಾಯ್ಕ್ ಜಾಗಕ್ಕೆ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನು ವರ್ಗಾವಣೆ ಮಾಡಿ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಡ್ರಗ್ಸ್ ಪ್ರಕರಣದ ತನಿಖೆ ಮುಂದೆ ಎತ್ತ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.








