ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅಮೆರಿಕ ಮತ್ತು ಸ್ಪೇನ್ ಪ್ರವಾಸ ಮಾಡಿದ್ದ ಇಬ್ಬರು ಬೆಂಗಳೂರು ಮೂಲದವರಲ್ಲಿ ಸೋಂಕು ಪತ್ತೆಯಾಗಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು, ‘ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಒಬ್ಬರು 56 ವಯಸ್ಸು, ಅಮೆರಿಕ ಪ್ರವಾಸದಿಂದ ಮಾರ್ಚ್ 6ರಂದು ಹಿಂದಿರುಗಿದ್ದರು. ಇನ್ನೊಬ್ಬರು 25 ವರ್ಷದ ಮಹಿಳೆಯು, ಸ್ಪೇನ್ ಪ್ರವಾಸದಿಂದ ಹಿಂದಿರುಗಿದ್ದು, ಇಬ್ಬರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಹಾಗೂ ಇವರೊಂದಿಗೆ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡಲಾಗಿ, ಅವರೆಲ್ಲರನ್ನೂ ಕಡ್ಡಾಯವಾಗಿ ಅವರ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆ ಮಾಡುವ ಕಾರ್ಯ ನಿರಂತರ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದುವರೆಗೆ 11 ಇದ್ದಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೊಷ್ಟು ಕೊರೊನಾ ವೈರಸ್ ಸೋಂಕಿನ ಭೀತಿಯನ್ನು ಹೆಚ್ಚಿಸಿದೆ.









