ಅಹಮದಾಬಾದ್ : ರಾಜ್ಯಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿದ್ದು, ಗುಜರಾತ್ ನ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಶಾಸಕ ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮ ಪತ್ರವನ್ನು ಸಲ್ಲಿಸಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ ಪತ್ರವನ್ನು ಸ್ವೀಕರಿಸಿರುವುದಾಗಿ ಸ್ಪೀಕರ್ ತ್ರಿವೇದಿ ಸ್ಪಷ್ಟಪಡಿಸಿದ್ದಾರೆ.
ಅಕ್ಷಯ್ ಪಟೇಲ್ ವಡೋದರದ ಕರ್ಜನ್ ಕ್ಷೇತ್ರದಿಂದ ಜಿತು ಚೌದರಿ ವಲ್ಸಾದ್‌ನ ಕಪ್ರಡಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಿನ್ನೆಯಷ್ಟೇ ಈ ಇಬ್ಬರು ನಾಯಕರು ಸಿಎಂ ವಿಜಯ್ ರೂಪಾಣಿ ಮತ್ತು ಡಿಸಿಎಂ ನಿತಿನ್ ಪಟೇಲ್ ಅವರನ್ನು ಭೇಟಿಯಾಗಿದ್ದರು.
“ಭಾರತವು ಸ್ವತಂತ್ರ ಭಾರತದಲ್ಲಿ ಅತಿ ದೊಡ್ಡ ಆರೋಗ್ಯ, ಆರ್ಥಿಕ ಹಾಗೂ ಮಾನವೀಯ ಬಿಕ್ಕಟ್ಟುಗಳ ನಡುವೆ ಇದೆ. ಬಿಜೆಪಿ ರಾಜ್ಯಸಭಾ ಚುನಾವಣೆಗಾಗಿ ತನ್ನಲ್ಲಾ ಶಕ್ತಿಯನ್ನು ಬಳಸಿ ಶಾಸಕರನ್ನು ಬೇಟೆಯಾಡುವುದನ್ನು ಬಿಟ್ಟು ಬೇರೆನೂ ಯೋಚಿಸಲು ಸಾಧ್ಯವಿಲ್ಲ. ಇದರಿಂದ ಜನರಿಗೆ ನಷ್ಟ” ಎಂದು ಎಐಸಿಸಿ ಉಸ್ತುವಾರಿ ರಾಜೀವ್ ಸಟಾವ್ ಟ್ವೀಟ್ ಮಾಡಿದ್ದಾರೆ.
ಗುಜರಾತ್‌ನಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳು ಖಾಲಿ ಇದ್ದು, ಜೂನ್ 19 ರಂದು ಚುನಾವಣೆ ನಡೆಯಲಿದೆ.