ಕೆಎಸ್ಒಯು ಅಂತಿಮ ವರ್ಷದ ಬಿ.ಎ ವಿದ್ಯಾರ್ಥಿಗಳಿಗೆ ನಾಳೆ ಎರಡು ಪರೀಕ್ಷೆ
ಮೈಸೂರು, ಅಕ್ಟೋಬರ್01: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್ಒಯು) ಅಂತಿಮ ವರ್ಷದ ಬಿ.ಎ ವಿದ್ಯಾರ್ಥಿಗಳಿಗೆ ಒಂದೇ ದಿನ ಎರಡು ಪರೀಕ್ಷೆಗಳನ್ನು ನಿಗದಿ ಮಾಡಿದೆ.
ಅಕ್ಟೋಬರ್ 2ರಂದು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 9ರಿಂದ 12ರವರೆಗೆ ಇತಿಹಾಸ ಮತ್ತು ಮಧ್ಯಾಹ್ನ 2ರಿಂದ 5ರವರೆಗೆ ಸಮಾಜಶಾಸ್ತ್ರ ಪರೀಕ್ಷೆ ನಿಗದಿ ಪಡೆಸಲಾಗಿದೆ. ಈ ಪರೀಕ್ಷೆಗಳು ಸೆಪ್ಟೆಂಬರ್ 25 ಮತ್ತು 28 ರಂದು ನಡೆಯಬೇಕಿತ್ತು. ಆದರೆ ಸೆಪ್ಟೆಂಬರ್ 25ರಂದು ಪ್ರತಿಭಟನೆ ಮತ್ತು 28ರಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೆಎಸ್ಒಯು ಕುಲಪತಿ ಡಾ.ಎಸ್. ವಿದ್ಯಾಶಂಕರ್, ದೂರಶಿಕ್ಷಣದ ಮೂಲಕ ಪರೀಕ್ಷೆ ಬರೆಯುವ ಬಹುತೇಕ ವಿದ್ಯಾರ್ಥಿಗಳು ಬೇರೆ ಬೇರೆ ಉದ್ಯೋಗದಲ್ಲಿರುತ್ತಾರೆ.
ಎಲ್ಲರಿಗೂ ಅನುಕೂಲವಾಗುವಂತೆ ಪರೀಕ್ಷಾ ವೇಳಾಪಟ್ಟಿ ನಿಗದಿ ಮಾಡುವುದು ಸವಾಲಿನ ಕೆಲಸ. ಮೊದಲಿನ ವೇಳಾಪಟ್ಟಿಯನ್ನು ಎಲ್ಲ ಪರಿಶೀಲಿಸಿ ನಿಗದಿ ಮಾಡಲಾಗಿತ್ತು. ಆದರೆ ಬಂದ್ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಯಿತು ಎಂದು ತಿಳಿಸಿದ್ದಾರೆ.
ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೂಡ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಮುಂದೂಡಲ್ಪಟ್ಟ ಕಾರಣದಿಂದ ಅವರಿಗೂ ತೊಂದರೆಯಾಗಿದೆ. ಅಕ್ಟೋಬರ್ 7ರಂದು ಅವರು ಕರ್ತವ್ಯಕ್ಕೆ ತೆರಳಬೇಕಾಗಿದ್ದು, ಬೇಗನೇ ಪರೀಕ್ಷೆ ಪೂರ್ಣಗೊಳಿಸಿ ಎಂದು ಮನವಿ ಮಾಡಿದ್ದಾರೆ. ಅವರಷ್ಟೇ ಅಲ್ಲ ಇನ್ನೂ ಹಲವಾರು ಅಭ್ಯರ್ಥಿಗಳು ಪರೀಕ್ಷೆಗಳನ್ನು ಬೇಗ ಪೂರ್ಣಗೊಳಿಸಿ ಎಂದು ಮನವಿ ಮಾಡಿದ್ದಾರೆ ಎಂದು ಕೆಎಸ್ಒಯು ಕುಲಪತಿ ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಅನೇಕರಿಗೆ ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅದೇ ಮಾನ
ದಂಡವನ್ನು ಅನುಸರಿಸಿ, ಅಕ್ಟೋಬರ್ 2ರಂದು ಎರಡು ಪತ್ರಿಕೆಗಳನ್ನು ಉತ್ತರಿಸಲಾಗದವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೆ. ಒಂದು ಪತ್ರಿಕೆಗೆ ಅವರು ಗೈರು ಹಾಜರಾದದೆ, ಮತ್ತೊಂದು ದಿನ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 2ರಂದು ಬೇರೆ ಪರೀಕ್ಷೆಗೆ ಹಾಜರಾದ ಅಥವಾ ಎರಡು ಪತ್ರಿಕೆ ಇದ್ದ ಬಗ್ಗೆಗಿನ ಪ್ರವೇಶ ಪತ್ರವನ್ನು ತೋರಿಸಿದರೆ ಅವರಿಗೆ ಮತ್ತೊಂದು ಅವಕಾಶ ನೀಡಲಾಗುವುದು ಎಂದು ಕುಲಪತಿ ಅವರು ಸ್ಪಷ್ಟಪಡಿಸಿದ್ದಾರೆ.








