ಬೀರ್ ಬಲ್ ಟ್ರೈಲಜಿಯ ಮೊದಲ ಭಾಗಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರ ಮತ್ತೆರಡು ಚಿತ್ರಗಳನ್ನು ಶುರುಮಾಡಲು ನಟ, ನಿರ್ದೇಶಕ ಎಂ.ಜಿ ಶ್ರೀನಿವಾಸ್ ಮುಂದಾಗಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ‘ಬೀರ್ ಬಲ್’ ಅನ್ನು ಮನೆಯಲ್ಲಿ ಕುಳಿತ ಜನರು, ಒಟಿಟಿ ಮೂಲಕ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಅಮೆಜಾನ್ ಪ್ರೈಮ್ನಲ್ಲಿ 2.50 ಕೋಟಿಗೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ.
ಇನ್ನೂ ಎರಡು ಥ್ರಿಲ್ಲರ್ ಭಾಗಗಳು ಈ ಚಿತ್ರದಲ್ಲಿದ್ದು, ‘ಬೀರ್ ಬಲ್ ಟ್ರೈಲಜಿ’ ಎಂಬ ಶೀರ್ಷಿಕೆ ಎಲ್ಲದಕ್ಕೂ ಕಾಮನ್ ಆಗಿ ಇರಲಿದೆ. ಎರಡನೆಯ ಭಾಗ ‘ಅವ್ರನ್ ಬಿಟ್, ಇವ್ರನ್ ಬಿಟ್ ಅವ್ರ್ಯಾರು? ಎಂಬ ಉಪ ಶೀರ್ಷಿಕೆ ಹೊಂದಿರಲಿದೆ. ಮೂರನೇ ಭಾಗ ‘ತುರೆಮಣೆ’ ಎಂಬ ಉಪ ಶೀರ್ಷಿಕೆ ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ.
ಅಂದ್ಹಾಗೆ ಬೀರ್ ಬಲ್’ ಚಿತ್ರವು ಒಟ್ಟು ಮೂರು ಭಾಗಗಳನ್ನು ಹೊಂದಿದೆ ಎಂದು ಶ್ರೀನಿವಾಸ್, ಚಿತ್ರದ ಬಿಡುಗಡೆ ಸಂದರ್ಭದಲ್ಲಿಯೇ ಹೇಳಿದ್ದರು. ಈ ಚಿತ್ರ ಕೊರಿಯನ್ ಚಿತ್ರವನ್ನು ಆಧರಿಸಿದೆ ಎಂಬ ಮಾತುಗಳು ಕೇಳಿಬಂದರೂ, ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪರಭಾಷಿಕರೂ ಚಿತ್ರವನ್ನು ಇಷ್ಟಪಟ್ಟಿರುವುದು ‘ಬೀರ್ ಬಲ್’ ಸರಣಿಯ ಮತ್ತೆರಡು ಚಿತ್ರಗಳನ್ನು ಶುರುಮಾಡಲು ಪ್ರಮುಖ ಕಾರಣವಾಗಿದೆ.
ಇನ್ನು ಸದ್ಯ ಶ್ರೀನಿವಾಸ್ ‘ಓಲ್ಡ್ ಮಾಂಕ್’ ಎಂಬ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ಅವರು ‘ಬೀರ್ ಬಲ್’ ಸರಣಿಯನ್ನು ಮುಂದುವರಿಸಲಿದ್ದಾರೆ.






