ಬಳ್ಳಾರಿ : ಹೆಮ್ಮಾರಿ ಕೊರೊನಾ ವೈರಸನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವ ಸಮಯದಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಮಾಹಾಮಾರಿಯನ್ನು ಕಟ್ಟಿ ಹಾಕುವುದು ಕಷ್ಟ ಸಾದ್ಯ ಎಂದು ಕೊರೊನಾ ನಿಯಂತ್ರಣದಲ್ಲಿ ತಮ್ಮ ಸರ್ಕಾರ ವಿಫಲವಾಗಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
74ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತಿದೆ. ನಿನ್ನೆ ಇದ್ದವರು ಇಂದು ಇಲ್ಲಾ ಎನ್ನುವ ಸನ್ನಿವೇಶ ನಿರ್ಮಾಣವಾಗಿದೆ. ನಗರ ಪ್ರದೇಶಕ್ಕೆ ಹೋಲಿಕೆ ಮಾಡಿಕೊಂಡ್ರೆ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹರಡುವಿಕೆ ತೀರಾ ಕಡಿಮೆ. ನಗರ ಪ್ರದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದೆ. ಈ ರೀತಿಯ ಸಂದರ್ಭದಲ್ಲಿ ಕೊರೊನಾ ಮಹಾಮಾರಿಯನ್ನು ಕಟ್ಟಿ ಹಾಕುವುದು ತೀರಾ ಕಷ್ಟದ ಕೆಲಸ ಎಂದು ಹೇಳಿದ್ದಾರೆ.
ಕೊರೊನಾ ನಿಯಂತ್ರಣದ ನಮ್ಮ ಪ್ರಯತ್ನ ಮಾತ್ರ ನಿರಂತರವಾಗಿ ಇರಲಿದೆ ಎಂದ ಸಚಿವರು ಜನರು ಸರ್ಕಾರದ ಜೊತೆ ನಿಲ್ಲಬೇಕು. ಜ್ವರ ಕೆಮ್ಮು ಶೀತ ಬಂದರೆ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.