ಮಂಗಳೂರು : ಕೊರೊನಾ ಸೋಂಕಿತರಿಗೆ ರಾಜ್ಯದಲ್ಲಿ ಎಲ್ಲೂ ಉಚಿತವಾಗಿ ಚಿಕಿತ್ಸೆ ನೀಡುತ್ತಿಲ್ಲ. ಹೀಗಾಗಿ ಚಿಕಿತ್ಸೆಗಾಗಿ ಹಣ ಪಾವತಿಸಿದ ಎಲ್ಲರ ಹಣವನ್ನು ರಾಜ್ಯ ಸರ್ಕಾರ ಮರು ಪಾವತಿಸಬೇಕು ಎಂದು ಮಾಜಿ ಆರೋಗ್ಯ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೊರೊನಾ ಪಾಸಿಟಿವ್ ಬಂದವರಿಗೆ ಎಲ್ಲೂ ಉಚಿತ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಚಿಕಿತ್ಸೆಗಾಗಿ ಅವರು ಆಸ್ಪತ್ರೆಗಳಲ್ಲಿ ಪಾವತಿ ಮಾಡಿರುವ ಹಣವನ್ನು ರಾಜ್ಯ ಸರ್ಕಾರ ಮರು ಪಾವತಿಸಬೇಕು. ಆಗ ಆಸ್ಪತ್ರೆಗಳು ಎಷ್ಟು ಬಿಲ್ ಮಾಡಿದೆ ಅನ್ನೋದು ಸರ್ಕಾರಕ್ಕೆ ಗೊತ್ತಾಗುತ್ತದೆ. ಸರ್ಕಾರ ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತವಾಗಬೇಕೆಂದು ಖಾದರ್ ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೊನಾ ಪಾಸಿಟಿವ್ ಹಾಗೂ ಕೊರೊನಾದಿಂದ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಎಲ್ಲೆಡೆ ಲಾಕ್ ಡೌನ್ ಸಡಿಲಿಸಿದ್ದಾರೆ. ಇತ್ತೀಚೆಗೆ ಕೊರೊನಾ ಟೆಸ್ಟಿಂಗ್ ಕೂಡ ಕಡಿಮೆ ಮಾಡಿದ್ದಾರೆ. ಬೀದಿ ವ್ಯಾಪಾರಿಗಳು, ಇತರೆ ಎಲ್ಲಾ ರೀತಿಯ ವ್ಯಾಪಾರಿಗಳು, ಲಾರಿ, ಬಸ್ ಚಾಲಕರಿಗೆ ಕೊರೊನಾ ರಿಪೋರ್ಟ್ ತರಲು ಆದೇಶಿಸಿ. ಆಗ ಎಲ್ಲರೂ ತಪಾಸಣೆ ಮಾಡುತ್ತಾರೆ ಎಂದು ಖಾದರ್ ಸಲಹೆ ನೀಡಿದ್ದಾರೆ.