ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಕ್ಷಿಣ ಮುಂಬೈನ ವಿಧಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಪರಿಷತ್ ಅಧ್ಯಕ್ಷ ರಾಮರಾಜೆ ನಾಯಕ್ ನಿಂಬಳ್ಕರ್ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾದ ಠಾಕ್ರೆ ಮತ್ತು ಇತರ 8 ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಉದ್ಧವ್ ಠಾಕ್ರೆ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದರು. ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಉದ್ಧವ್ ಠಾಕ್ರೆ ಅವರನ್ನು ರಾಜ್ಯಪಾಲರು ಅಭಿನಂದಿಸಿದ್ದಾರೆ.