ಉಡುಪಿ: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರ ಮಧ್ಯೆ ಕೊರೊನಾ ರೋಗಿಗಳ ಚಿಕಿತ್ಸೆ ವೇಳೆ ವೈದ್ಯರು ಧರಿಸುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ರಕ್ಷಾ ಕವಚವೊಂದು ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಳ ಬಳಿಯ ನದಿಯಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ನದಿಯಲ್ಲಿ ಎಸೆಯಲಾಗಿರುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಬಗ್ಗೆ ಪಂಚಾಯಿತಿ ಕಚೇರಿಯ ಸಿಬ್ಬಂದಿ ಮಂಗಳವಾರ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು, ನಂತರ ಈ ಸಂಬಂಧ ಪೊಲೀಸರಿಗೂ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು “ಈ ರಕ್ಷಾ ಕವಚ ಯಾವ ಆಸ್ಪತ್ರೆಯ ವೈದ್ಯರು ಬಳಸಿದ್ದು, ಅದನ್ನು ಯಾವ ಉದ್ದೇಶಕ್ಕಾಗಿ ನದಿಗೆ ಎಸೆಯಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ.
ಈ ಕುರಿತು ಮಾತನಾಡಿರುವ ಕೊರೊನಾ ವೈರಸ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್, ಪೊಲೀಸ್ ತನಿಖೆಯ ನಂತರ ವೈಯಕ್ತಿಕ ಸುರಕ್ಷಾ ಸಾಧನವನ್ನು ಜೈವಿಕ ರಸಾಯನಿಕ ನಿರ್ವಹಣಾ ವಿಧಾನದಲ್ಲಿ ನಾಶಗೊಳಿಸಬೇಕಿದೆ ಎಂದು ಹೇಳಿದ್ದಾರೆ.