ಉಡುಪಿ – ಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತ ಬಾಲಕನಿಗೆ ಸನ್ಯಾಸ ದೀಕ್ಷೆ

1 min read
Udupi Shiroor mutt

ಉಡುಪಿ – ಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತ ಬಾಲಕನಿಗೆ ಸನ್ಯಾಸ ದೀಕ್ಷೆ

ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ವಟು ಒಬ್ಬರನ್ನು ಮಠಾಧಿಪತಿಯಾಗಿ ನೇಮಕ ಮಾಡಿರುವುದು ಇದೀಗ ಕರ್ನಾಟಕ ಹೈಕೋರ್ಟ್ ಮೆಟ್ಟಲೇರಿದೆ.
ಶೀರೂರುಮಠದ ನಿಕಟ ಪೂರ್ವ ಯತಿ ಲಕ್ಷ್ಮೀ ವರ ತೀರ್ಥ ಸ್ವಾಮೀಜಿ ಸಹೋದರ ಲಾತವ್ಯ ಆಚಾರ್ಯ, ಅಪ್ರಾಪ್ತ ಬಾಲಕನಿಗೆ ಒತ್ತಾಯದಿಂದ ಸನ್ಯಾಸ ದೀಕ್ಷೆ ನೀಡಿದ್ದಾರೆ. 16 ವರ್ಷದ ವಟುವೊಬ್ಬರನ್ನು ಮಠಾಧಿಪತಿ ಮಾಡಿರುವುದು ಕಾನೂನಾತ್ಮಕವಾಗಿ ಸರಿಯೇ ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಉಡುಪಿ ಶೀರೂರು ಮಠಕ್ಕೆ 16 ವರ್ಷದ ವಟುವನ್ನು ಮಠಾಧಿಪತಿಯನ್ನಾಗಿ ನೇಮಕ ಮಾಡಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಜೂನ್ 2ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ನ್ಯಾಯಪೀಠವು ಹೇಳಿದೆ.
Udupi Shiroor mutt

ಅರ್ಜಿಯಲ್ಲೇನಿದೆ ?

ಲಾತವ್ಯ ಆಚಾರ್ಯ ಅವರು ‌ಸೋದೆ ಮಠದ ಮಠಾಧೀಶರು 16 ವರ್ಷದ ವಟು ಒಬ್ಬರನ್ನು ಶಿರೂರು ಮಠದ ಮುಂದಿನ ಪೀಠಾಧಿಪತಿ ಎಂದು ಘೋಷಿಸಿ ದೀಕ್ಷೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ. ಇದರಿಂದಾಗಿ ಅಪ್ರಾಪ್ತನ ಹಕ್ಕುಗಳ ಉಲ್ಲಂಘನೆಯಾಗಿವೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.
ಸೋದೆ ಮಠ ಅರ್ಥಿಕ ಸಂಕಷ್ಟದಲ್ಲಿದ್ದು, ಶೀರೂರು ಮಠದ ಆಸ್ತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ‌

ಸೋದೆ ಮಠದ ಪೀಠಾಧಿಪತಿಗೆ ಶೀರೂರು ಮಠದ ಯಾವುದೇ ವಿಗ್ರಹಗಳು ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರ ಮಾಡಬಾರದು ಎಂದು ಕಳೆದ ಮಾರ್ಚ್ ತಿಂಗಳಲ್ಲಿಯೇ ಲೀಗಲ್ ನೊಟೀಸ್ ನೀಡಿ ಸೂಚಿಸಲಾಗಿದೆ. ಆದರೆ ಇದೀಗ ಶಿರೂರು ಮಠದ ಅನುಯಾಯಿಯೂ ಅಲ್ಲದ ಬಾಲಕನನ್ನು ಪೀಠಾಧಿಪತಿಯೆಂದು ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸೋದೆ ಮಠದ ಪೀಠಾಧಿಪತಿಗಳ ಪ್ರತಿಕ್ರಿಯೆ

ಒತ್ತಾಯದಿಂದ ಅಪ್ರಾಪ್ತ ವಯಸ್ಕನಿಗೆ ಸನ್ಯಾಸ ದೀಕ್ಷೆ ನೀಡಿಲ್ಲ. ವಿದ್ಯಾವರ್ಧನ‌ ತೀರ್ಥ ( ಹಿಂದಿನ ಹೆಸರು ಅನಿರುದ್ಧ ಸರಳತ್ತಾಯ) ರ ಹೆತ್ತವರ ಒಪ್ಪಿಗೆ ಮೇರೆಗೆ ದೀಕ್ಷೆ ನೀಡಲಾಗಿರುವುದು ಎಲ್ಲರಿಗೂ ತಿಳಿದಿದೆ. ವಟುವಿನ ಜಾತಕದಲ್ಲಿ ಸನ್ಯಾಸ ಯೋಗವಿದ್ದು, ಮನೋಧರ್ಮವನ್ನು ವಿಮರ್ಶಿಸಲಾಗಿದೆ. ಆದರೆ ಇದನ್ನು ‌ಪ್ರಶ್ನಿಸಲು ಮೂರನೇ ವ್ಯಕ್ತಿ ಲಾತವ್ಯ ಆಚಾರ್ಯ ಯಾರು ಎಂದು ಸೋದೆ ಮಠದ ಪೀಠಾಧಿಪತಿಗಳು ಪ್ರಶ್ನಿಸಿದ್ದಾರೆ.
ಬಾಲ ಸನ್ಯಾಸ ಕಾನೂನು ಬಾಹಿರ ಎಂಬ ಬಗ್ಗೆ ಯಾವ ದಾಖಲೆಗಳಿಲ್ಲ. ಕೋರ್ಟ್ ನಮ್ಮಲ್ಲಿ ಮಾಹಿತಿ ಕೇಳಿದರೆ ನಾವು ಅದಕ್ಕೆ ‌ಉತ್ತರ ನೀಡಲು ಸಿದ್ಧರಿದ್ದೇವೆ. ಅರ್ಜಿದಾರರ ಘನ ಉದ್ದೇಶ ಏನು ಎಂಬುವುದು ಮಠದ ಭಕ್ತಾದಿಗಳಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ವಿದ್ಯಾವರ್ಧನ‌ ತೀರ್ಥರ ಪ್ರತಿಕ್ರಿಯೆ

ಸನ್ಯಾಸ ಸ್ವೀಕಾರ ನನ್ನ ವೈಯುಕ್ತಿಕ ‌ನಿರ್ಧಾರವಾಗಿದ್ದು, ಇಲ್ಲಿ ಅಮಿಷ, ಒತ್ತಡದ ಪ್ರಶ್ನೆಯೇ ಇಲ್ಲ. ನನ್ನ ಬಗ್ಗೆ ಸರಿಯಾಗಿ ತಿಳಿದುಕೊಂಡು ಸೋದೆ ಮಠದ ಪೀಠಾಧಿಪತಿಗಳು ದೀಕ್ಷೆ ನೀಡಿದ್ದಾರೆ ಎಂದು ‌ಶೀರೂರು ಮಠಾಧಿಪತಿ ತಿಳಿಸಿದ್ದಾರೆ.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

#Udupi #Shiroormutt

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd