ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಉಡುಪಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕಾಗಿ ಆಗಮಿಸುತ್ತಿದ್ದಾರೆ. ಸಾಮಾನ್ಯವಾಗಿ, ಸಮುದ್ರ ತೀರಕ್ಕೆ ಬರುವ ಮಕ್ಕಳು ನೀರಿನಲ್ಲಿ ಆಟ ಆಡಲು ಅಥವಾ ಸ್ನಾನ ಮಾಡಲು ಇಳಿಯುವುದು ಸಹಜ.
ಆದರೆ, ಸಮುದ್ರದ ಅಲೆಗಳ ತೀವ್ರತೆಯ ಕುರಿತು ತಿಳಿವಳಿಕೆ ಇಲ್ಲದಿರುವ ಕಾರಣ, ಕೆಲವು ಸಂದರ್ಭಗಳಲ್ಲಿ ಮಕ್ಕಳು ಅಥವಾ ಪ್ರವಾಸಿಗರು ನೀರಿಗೆ ಇಳಿದು ಪ್ರಾಣಾಪಾಯಕ್ಕೆ ಗುರಿಯಾಗುತ್ತಿದ್ದಾರೆ.
ಪಾಲಕರು ಮತ್ತು ಶಾಲೆಗಳಿಗೆ ಮಾರ್ಗಸೂಚಿ
ಮಕ್ಕಳ ಸುರಕ್ಷತೆಗಾಗಿ ಪ್ರವಾಸೋದ್ಯಮ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ:
ಪಾಲಕರ ಜವಾಬ್ದಾರಿ: ಮಕ್ಕಳೊಂದಿಗೆ ಬರುವ ಪಾಲಕರು, ತಮ್ಮ ಮಕ್ಕಳು ನೀರಿಗೆ ಇಳಿಯದಂತೆ ನೋಡಿಕೊಳ್ಳಬೇಕು.
ಶೈಕ್ಷಣಿಕ ಪ್ರವಾಸದ ಮೇಲ್ವಿಚಾರಣೆ: ಶಾಲಾ ಶಿಕ್ಷಕರು, ಉಪನ್ಯಾಸಕರು, ಮತ್ತು ಮುಖ್ಯೋಪಾದ್ಯಾಯರು ಮಕ್ಕಳಿಗೆ ನದಿ, ಜಲಪಾತಗಳು ಮತ್ತು ಸಮುದ್ರದ ಅಲೆಗಳ ಅಪಾಯಗಳ ಕುರಿತು ಮಾಹಿತಿ ನೀಡಿ ಮುನ್ನೆಚ್ಚರಿಕೆ ವಹಿಸಬೇಕು.
ಅಪಾಯಕಾರಿ ಸ್ಥಳಗಳನ್ನು ತಪ್ಪಿಸಬೇಕು: ಶಾಲೆಗಳು ಮಕ್ಕಳನ್ನು ಅಪಾಯಕಾರಿಯ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು.
ಮೆಲ್ವಿಚಾರಣೆ ಮತ್ತು ಹೊಣೆಗಾರಿಕೆ: ಪ್ರವಾಸದ ವೇಳೆ ಮಕ್ಕಳ ಮೇಲೆ ಶಾಲಾ ಸಿಬ್ಬಂದಿ ಹಾಗೂ ಪ್ರವಾಸದ ಉಸ್ತುವಾರಿ ವಹಿಸಿದವರು ಕಣ್ಣಿಟ್ಟಿರಬೇಕು. ಪ್ರವಾಸದ ವೇಳೆ ನಡೆಯುವ ಯಾವುದೇ ಘಟನೆಗಳಿಗೆ, ಶಾಲಾ ಮುಖ್ಯಸ್ಥರು ಮತ್ತು ಉಸ್ತುವಾರಿ ಸಿಬ್ಬಂದಿಯೇ ಹೊಣೆಗಾರರು.
ಬೀಚ್‌ಗಳಲ್ಲಿ ಸುರಕ್ಷತಾ ಕ್ರಮಗಳು
ಉಡುಪಿಯ ಪ್ರಮುಖ ಬೀಚ್‌ಗಳಾದ ಮಲ್ಪೆ ಬೀಚ್, ಕಾಪು ಬೀಚ್, ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್, ಪಡುಬಿದ್ರಿ ಮುಖ್ಯ ಬೀಚ್, ಮತ್ತು ತ್ರಾಸಿ ಮರವಂತೆ ಬೀಚ್‌ಗಳಲ್ಲಿ ಬಾತಿಂಗ್ ಜೋನ್‌ಗಳನ್ನು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ.
ಪ್ರವಾಸಿಗರು ಮತ್ತು ಮಕ್ಕಳು ಈ ಬಾತಿಂಗ್ ಜೋನ್ ವ್ಯಾಪ್ತಿಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು.
ಸ್ಥಳೀಯ ಪೊಲೀಸ್, ಲೈಫ್ ಗಾರ್ಡ್, ಪ್ರವಾಸಿಮಿತ್ರ, ಮತ್ತು ಭದ್ರತಾ ಸಿಬ್ಬಂದಿಯ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.
ಪ್ರವಾಸಿಗರು ಈ ಬೀಚ್‌ಗಳಲ್ಲಿ ದೂರದಿಂದಲೇ ನೋಡಿ ಆನಂದಿಸಿ ಸುರಕ್ಷಿತವಾಗಿ ವಾಪಸ್ಸು ಹೋಗಲು ಸಲಹೆ ನೀಡಲಾಗಿದೆ.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಈ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇದು ಪ್ರವಾಸಿಗರ ಮತ್ತು ಮಕ್ಕಳ ಸುರಕ್ಷತೆಗಾಗಿ ರೂಪಿಸಲಾಗಿದೆ.








