ಹೊಸ ದಿಲ್ಲಿ, ಮೇ 22 : ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಕೊರೊನಾದಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಪ್ರಧಾನಿಯೊಬ್ಬರಿಂದಲೇ ನಿಭಾಯಿಸಲು ಸಾಧ್ಯವಿಲ್ಲ. ಇದರಿಂದ ದೇಶದ ಅರ್ಥಿಕತೆ ಮತ್ತಷ್ಟು ಬಿಗಡಾಯಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಘುರಾಮ್ ರಾಜನ್, ಅವರು ನಾವು ಎದುರಿಸುತ್ತಿರುವ ದೊಡ್ಡ ಆರ್ಥಿಕ ಹೊಡೆತ ಬಗ್ಗೆ ನನಗೆ ಬೇಸರವಿದೆ. ಇದು ಕೇವಲ ಪ್ರಧಾನಿ ಕಾರ್ಯಲಯದಿಂದ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ. ವಿರೋಧ ಪಕ್ಷಗಳ ಅಭಿಪ್ರಾಯಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ, ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಕುಸಿಯುವುದು ಖಂಡಿತ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಮೊದಲು ಭಾರತ ಸರ್ಕಾರದ ಆರ್ಥಿಕ ಸಲಹೆಗಾರರು ಮತ್ತು ಐಎಮ್ಎಫ್ ನ ಮುಖ್ಯಸ್ಥರು ಆಗಿ ಕಾರ್ಯ ನಿರ್ವಹಿಸಿದ್ದ ರಘುರಾಮ್ ರಾಜನ್ ಕೊರೊನಾ ಸೋಂಕಿನಿಂದ ಉಂಟಾಗಿರುವ ಆರ್ಥಿಕ ಪರಿಸ್ಥಿತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ದೇಶದ ವಿವಿಧ ಆರ್ಥಿಕ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ದೇಶದ ಅರ್ಥಿಕ ವಿಚಾರದಲ್ಲಿ ರಾಜಕೀಯದ ಆಚೆ ನಿಂತು ಚಿಂತಿಸದಿದ್ದರೆ ಮುಂದೆ ಪರಿಸ್ಥಿತಿ ತುಂಬಾ ಹದಗೆಡಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಲಾಕ್ ಡೌನ್ ಮತ್ತು ಕೊರೊನಾದಿಂದ ಉಂಟಾಗಿರುವ ನಷ್ಟವನ್ನು ಭರಿಸುವುದಷ್ಟೇ ಮುಖ್ಯವಲ್ಲ ಜೊತೆಗೆ ಹಳಿ ತಪ್ಪಿರುವ ಆರ್ಥಿಕತೆಯನ್ನು ಮುಂದಿನ ಮೂರು – ನಾಲ್ಕು ವರ್ಷಗಳ ಕಾಲ ನಿಭಾಯಿಸುವ ಸವಾಲು ನಮ್ಮ ಮುಂದಿದೆ. ಆದರೆ ಸರ್ಕಾರ ದಾರಿ ತಪ್ಪಿರುವ ಅರ್ಥಿಕತೆಯ ಜವಾಬ್ದಾರಿ ಹೊರಲು ತಯಾರಿಲ್ಲ ಮತ್ತು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ರಘುರಾಮ್ ರಾಜನ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಬಿಜೆಪಿಯ ಕೇಂದ್ರ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ, ಕಾಂಗ್ರೆಸ್ ನ ಪಿ ಚಿದಂಬರಂ ಸೇರಿ ಅನೇಕ ಘಟಾನುಘಟಿ ಆರ್ಥಿಕ ತಜ್ಞರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಬಿಟ್ಟು ಅವರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಘೋಷಿಸಿರುವ 20.9 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಬಗ್ಗೆ ಮಾತನಾಡಿರುವ ರಘುರಾಮ್ ರಾಜನ್ ಈ ಪ್ಯಾಕೇಜ್ ಅಸಮರ್ಪಕ ಎಂದು ಹೇಳಿದ್ದು, ಸರ್ಕಾರ ಮೊದಲು ಮುಂದಿರುವ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಮತ್ತು ಬಡ ಜನರಿಗೆ ಕೇವಲ ಧವಸ ಧಾನ್ಯ ನೀಡಿದರೆ ಸಾಕಾಗುವುದಿಲ್ಲ ಜೊತೆಗೆ ಅಡುಗೆ ಎಣ್ಣೆ, ತರಕಾರಿಗಳ ಅವಶ್ಯಕತೆಯೂ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ಬದುಕು ಸಾಗಿಸಲು ಹಣ, ತಲೆಯ ಮೇಲೆ ಸೂರಿನ ಅವಶ್ಯಕತೆ ಇದೆ ಎಂದ ರಘುರಾಮ್ ರಾಜನ್ ನಗರ ತೊರೆದು ಊರು ಸೇರಿರುವ ಯುವಕರನ್ನು ಪುನಃ ನಗರದತ್ತ ಸೆಳೆಯುವಲ್ಲಿ ಸರ್ಕಾರದ ಜವಾಬ್ದಾರಿ ಬಹಳವಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಅಮೆರಿಕದ ಮಾದರಿಯಲ್ಲಿ ಉದ್ಯಮಗಳಿಗೆ ಹಣಕಾಸು ಸಹಾಯ ನೀಡಲು ಅಸಾಧ್ಯ. ಆದರೆ ಪ್ರಮುಖ ಉದ್ಯಮಗಳಿಗೆ ಸಾಲಮನ್ನಾದಂತಹ ಸೌಲಭ್ಯ ನೀಡಬಹುದು. ಹಣಕಾಸು ವಲಯಕ್ಕೆ ಈಗಾಗಲೇ ತೀವ್ರ ಹೊಡೆತ ಬಿದ್ದಿದ್ದು, ಅದರ ಪುನರ್ ಚೇತನಕ್ಕೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿದೆ ಎಂದು ರಾಜನ್ ಸಲಹೆ ನೀಡಿದರು.
ಸೋರಿಕೆಯನ್ನು ತಡೆಗಟ್ಟಿ ಅತ್ಯುತ್ತಮ ನಿರ್ವಹಣೆಯ ಮೂಲಕ ಸಾರ್ವಜನಿಕ ಬ್ಯಾಂಕ್ಗಳನ್ನು ಉಳಿಸುವ ಅಗತ್ಯವಿದೆ ಎಂದ ರಘುರಾಮ್ ರಾಜನ್ ಕೃಷಿ ಕ್ಷೇತ್ರ ಬದಲಾವಣೆಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಗೇಮ್ ಚೇಂಜರ್ ಆಗುವ ಸಾಧ್ಯತೆ ಇದ್ದು, ನೀಡಿರುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಮತ್ತು ಪ್ರಾಮಾಣಿಕವಾಗಿ ಜಾರಿಗೆ ತರುವುದು ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.








