ಮರೆಯಲಾಗದ ಮನುಕುಲದ ಮಹಾವೈದ್ಯ ನರಸೀಪುರದ ಸಣ್ಣಯ್ಯ ಹೆಗಡೆ: ನಿಜಾರ್ಥದಲ್ಲಿ ಅವರು ವೈದ್ಯ ನಾರಾಯಣರಾಗಿದ್ದರು
ಹಲವು ತರಹದ ರೋಗಗಳಿಗೆ ಪಾರಂಪರಿಕ ವಿಧಾನದಲ್ಲಿ ಮದ್ದು ನೀಡುತ್ತಿದ್ದ ನರಸೀಪುರದ ನಾಟೀ ವೈದ್ಯ ನಾರಾಯಣ ಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾರಾಯಣ ಮೂರ್ತಿಯವರು ಹಲವಾರು ದಶಕಗಳಿಂದ ಕ್ಯಾನ್ಸರ್ ಹಾಗೂ ಮಾರಕ ಪೀಡಿತ ಕಾಯಿಲೆಗಳಿಗೆ ಔಷಧವನ್ನು ನೀಡುತ್ತಿದ್ದರು. ರಾಜ್ಯ ದೇಶ ವಿದೇಶಗಳಿಂದ ಇವರ ಬಳಿ ಔಷಧಿಗಾಗಿ ಸಾವಿರಾರು ಜನ ದಿನಂಪ್ರತಿ ಬರುತ್ತಿದ್ದರು. ನರಸೀಪುರ ಅನ್ನುವ ಸಣ್ಣ ಹಳ್ಳಿ ಈಗೊಂದು ದಶಕದ ಹಿಂದೆಯೇ ಬಿಬಿಸಿಯ ಡಾಕ್ಯುಮೆಂಟರಿಯಲ್ಲಿ ಗುರುತಿಸಿಕೊಳ್ಳುವಂತಾಗಿದ್ದು ನಾರಾಯಣ ಮೂರ್ತಿಯವರಿಂದ. ವಿವಿಧ ತರಹದ ಕ್ಯಾನ್ಸರ್, ಮಧುಮೇಹ ಮುಂತಾದ ವ್ಯಾಧಿಗಳಿಗೆ ಬೇರನ್ನು ತೇದಿ ಲೇಹ ಕಷಾಯ ಕೊಟ್ಟು ನಾಟಿ ವೈದ್ಯ ಸೇವೆ ಮಾಡುತ್ತಿದ್ದವರು ನಾರಾಯಣ ಮೂರ್ತಿಗಳು. ನರಸೀಪುರ ಅಂದರೆ ನಾರಾಯಣ ಮೂರ್ತಿ ಅನ್ನುವಷ್ಟರ ಮಟ್ಟಿಗೆ ಪ್ರಸಿದ್ಧರಾಗಿದ್ದವರು ಅವರು. ಅವರಿಂದ ರೋಗ ವಾಸಿಯಾದವರ ಸಂಖ್ಯೆಯೂ ಬಹಳ ದೊಡ್ಡದಿದೆ. ಮುಖ್ಯವಾಗಿ ರೋಗಿಗಳಿಂದ ನಿರ್ದಿಷ್ಟ ಹಣ ವಸೂಲಿ ಮಾಡದೇ ಕೊಟ್ಟಷ್ಟು ತೆಗೆದುಕೊಂಡು ಮದ್ದು ಕೊಡುವ ನಾಟಿವೈದ್ಯರಾಗಿದ್ದರು ನಾರಾಯಣ ಮೂರ್ತಿಗಳು. ಶಿವಮೊಗ್ಗ ಜಿಲ್ಲೆ ಮತ್ತು ಸಾಗರ ತಾಲೂಕಿನ ಹೆಸರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರಲ್ಲಿ ಅವರೂ ಒಬ್ಬರು ಮತ್ತು ಪ್ರಮುಖರು. ನಮ್ಮ ಕುಟುಂಬದೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು ನಾರಾಯಣ ಮೂರ್ತಿ ಅಥವಾ ಸಣ್ಣಯ್ಯ ಹೆಗಡೆಯವರು ಅಥವಾ ಸಣ್ಣಿ ಡಾಕ್ಟ್ರು. ನರಸೀಪುರದ ವಿಸ್ಮಯಕಾರಿ ನಾಟಿ ವೈದ್ಯನ ಯುಗಾಂತ್ಯದ ಕುರಿತಾದ ಒಂದು ಸಣ್ಣ ನುಡಿನಮನವಿದು.
ನಮ್ಮ ತ್ಯಾಗರ್ತಿಯಿಂದ ನರಸೀಪುರಕ್ಕೆ 10 ಕಿಲೋ ಮೀಟರ್ ದೂರವಷ್ಟೆ. ಈಗೊಂದು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆಯೂ ನರಸೀಪುರಕ್ಕೆ ಜನ ಎತ್ತಿನ ಬಂಡಿ ಕಟ್ಟಿಕೊಂಡು ಹೋಗುತ್ತಿದ್ದರು. ಅವರಲ್ಲೇನೋ ನಂಬಿಕೆ, ಹಿತ್ತಿಲ್ಲ ಮದ್ದು, ಅರಳೇಕಾಯಿ ಪಂಡಿತನ ಮದ್ದು, ನಾಟಿವೈದ್ಯ, ಗ್ರಾಮೀಣ ಆರೋಗ್ಯ ಕೇಂದ್ರ ಕೊನೆಗೆ ಸಾಗರ, ಶಿವಮೊಗ್ಗದ ದೊಡ್ಡಾಸ್ಪತ್ರೆಯಲ್ಲಿ ವಾಸಿಯಾಗದ ಕಾಯಿಲೆಗಳು ನರಸೀಪುರದಲ್ಲಿ ವಾಸಿಯಾಗುತ್ತವೆ ಅನ್ನುವ ಆಶಾವಾದ. ನರಸೀಪುರದಲ್ಲಿ ಸಣ್ಣಿ ಡಾಕ್ಟ್ರು ಇದ್ದರು. ಅವರು ಕೊಡುವ ಬೇರು ನೀರು ಮಾಂತ್ರಿಕ ಶಕ್ತಿ ಹೊಂದಿರುತ್ತದೆ, ಸಣ್ಣಿ ಡಾಕ್ಟ್ರ ಕೈಗುಣ ದೈವಿಕ. ಅವರಿಗೆ ಕನಸಿನಲ್ಲಿ ಸರ್ಪವೊಂದು ಕಾಣಿಸಿಕೊಂಡು ಒಂದು ಸಸ್ಯ ತೋರಿಸಿ ನಾಗಲೋಕದ ವೈದ್ಯವಿದ್ಯೆ ಹೇಳಿಕೊಟ್ಟಿದೆ ಎಂಬಿತ್ಯಾದಿ ದಂತಕಥೆಗಳೇ ಸಣ್ಣಿ ಡಾಕ್ಟ್ರ ಸುತ್ತಾ ಹಣೆದುಕೊಂಡಿದ್ದವು. ನರಸೀಪುರ ಅನ್ನುವ ಸಾಗರ ತಾಲೂಕಿನ ಅತಿ ಸಣ್ಣ ಕುಗ್ರಾಮ ಲೋಕವಿಖ್ಯಾತಗೊಳ್ಳಲು ಕಾರಣ ಸಣ್ಣಿ ಡಾಕ್ಟ್ರು ಅಥವಾ ಸಣ್ಣಯ್ಯ ಹೆಗಡೆಯವರು ಅಥವಾ ನಾರಾಯಣ ಮೂರ್ತಿ.
ಈಗೊಂದು ಹತ್ತು ಹದಿನೈದು ವರ್ಷಗಳ ಹಿಂದೆ, ಗುರುವಾರ ಮತ್ತು ಭಾನುವಾರದ ದಿನ ಬೆಳ್ಳಂಬೆಳಿಗ್ಗೆ ನೀವೇನಾದರೂ ಆನಂದಪುರದ ಬಸ್ ಸ್ಟಾಂಡಿನಲ್ಲಿ ನಿಂತಿದ್ದರೆ ನಿಮಗೆ ಶಿವಮೊಗ್ಗದಿಂದ ಬರುತ್ತಿದ್ದ ಬಸ್ ನಿಂದ ಇಳಿಯುತ್ತಿದ್ದ ರಾಶಿ ರಾಶಿ ಕಾಣಸಿಗುತ್ತಿದ್ದರು. ಅವರಲ್ಲಿ ಕೆಲವರು ನಿಮ್ಮ ಬಳಿ ಬಂದು ನರಸೀಪುರಕ್ಕೆ ಹೇಗೆ ಹೋಗುವುದು ಎಂದು ವಿಚಾರಿಸುತ್ತಿದ್ದರು. ಉಳಿದ ದಿನಗಳು ಖಾಲಿ ಇರುತ್ತಿದ್ದ ಆನಂದಪುರದ ಸಣ್ಣ ಬಸ್ ನಿಲ್ದಾಣ ಭಾನುವಾರ ಮತ್ತು ಗುರುವಾರ ನಸುಕಿನಲ್ಲಿ ಮಾತ್ರ ತುಂಬಿ ತಳುಕುತ್ತಿತ್ತು. ಕಾರಣ ನರಸೀಪುರದ ನಾರಾಯಣ ಮೂರ್ತಿಗಳು ಔಷದಿ ಕೊಡುತ್ತಿದ್ದಿದ್ದೇ ಭಾನುವಾರ ಮತ್ತು ಗುರುವಾರ ಮಾತ್ರ. ಆನಂದಪುರದ ಆರ್ಥಿಕತೆ ಅಭಿವೃದ್ಧಿ ಹೊಂದುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನರಸೀಪುರದ ಸಣ್ಣಯ್ಯ ಹೆಗಡೆಯವರ ಪಾತ್ರ ದೊಡ್ಡದು. ವೈದ್ಯ ನಾರಾಯಣ ಮೂರ್ತಿಯವರನ್ನು ಸಣ್ಣಯ್ಯ ಹೆಗಡೆಯವರು ಎಂದು ಈ ಭಾಗದಲ್ಲಿ ಕರೆಯುತ್ತಿದ್ದರು, ನಮ್ಮ ಕಡೆಯಲ್ಲಿ ಅವರು ಸಣ್ಣಿ ಡಾಕ್ಟ್ರು ಎಂದೇ ಪ್ರಸಿದ್ಧರು.
ಹಾಗಂತ ನಾರಾಯಣ ಮೂರ್ತಿಗಳು ಅಮೇರಿಕಾದಲ್ಲೋ ಅಥವಾ ಬೇರೆ ಯಾವುದೋ ಯುರೋಪಿಯನ್ ರಾಷ್ಟ್ರಗಳ ಪ್ರಸಿದ್ಧ ಯೂನಿವರ್ಸಿಟಿಗಳಲ್ಲಿ ವೈದ್ಯಶಾಸ್ತ್ರದ ಉನ್ನತ ವ್ಯಾಸಂಗ ಮಾಡಿದವರಲ್ಲ. ಶಾಸ್ತ್ರೀಯಾಗಿ ಆಯುರ್ವೇದ ವೈದ್ಯಕೀಯ ಪದ್ಧತಿಯನ್ನೂ ಕಲಿತವರಲ್ಲ. ದೇಶದ ವಿವಿಧ ಕಾಡುಮೇಡು ಸುತ್ತಿ, ಹಿಮಾಲಯ ಹತ್ತಿಳಿದು ಗಿಡಮೂಲಕೆಗಳನ್ನು ಗಂಟುಕಟ್ಟಿ ತಂದು ಮದ್ದು ಕೊಡುವ ಅಳಲೇಕಾಯಿ ಪಂಡಿತರೂ ಅಲ್ಲ. ಅವರ ವೈದ್ಯ ಪದ್ಧತಿಯೇ ವಿಚಿತ್ರ, ವಿಶಿಷ್ಟ ಅಷ್ಟೇ ವಿಸ್ಮಯಕಾರಿ. ಮಾಸಲು ಬಣ್ಣದ ಕಾವಿ ಲುಂಗಿ ಉಟ್ಟು ಮೇಲೊಂದು ಹಚ್ಚ ಹಳೆಯ ಬನಿಯನ್ ಅನ್ನು ನೆಪಮಾತ್ರಕ್ಕೆ ತೊಟ್ಟುಕೊಂಡು, ಒಂದು ತಲೆ ಇಲ್ಲದ ಹರಿತ ಮುಂಡುಗತ್ತಿಯನ್ನು ಕೈನಲ್ಲಿ ಹಿಡಿದುಕೊಂಡು ಮನೆಯ ಹಿತ್ತಿಲಿನ ಸಣ್ಣ ಗುಡ್ಡ ಹತ್ತಿ, ಯಾವುದೋ ಮರದ ತೊಗಟೆ ಸೀಳಿ ತಂದು ತೇದಿ ಔಷಧ ತಯಾರಿಸುತ್ತಿದ್ದರು. ಆ ಹೆಸರಿಲ್ಲದ ಔಷಧವನ್ನು ಹುಡುಕಿಕೊಂಡು ಜಗತ್ತಿನ ನಾನಾ ಭಾಗಗಳಿಂದ ರೋಗಿಗಳು ಬರುತ್ತಿದ್ದರು.
ಬ್ಲಡ್ ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್, ಕಿಡ್ನಿ ಸ್ಟೋನ್, ಬ್ಲಡ್ ಶುಗರ್, ವಾತ, ಪಿತ್ತ, ಕಫ, ಪಾರ್ಶವಾಯು ಮುಂತಾದ ಹಲವು ರೋಗಗಳಿಗೆ ಅವರು ಮದ್ದು ಕೊಡುತ್ತಿದ್ದರು. ವೈದ್ಯಕೀಯ ಲೋಕಕ್ಕೆ ಅಚ್ಚರಿ ಎಂಬಂತೆ ಅವರ ಬಳಿ ಮದ್ದು ತೆಗೆದುಕೊಂಡ ಅನೇಕರು ಬದುಕುಳಿಯುತ್ತಿದ್ದರು ಮತ್ತು ಅವರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಾಣಿಸುತ್ತಿತ್ತು. ಗಲ್ಲು ಶಿಕ್ಷೆಗೆ ಗುರಿಯಾದ ಒಬ್ಬ ಖೈದಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಇತ್ಯಾದಿ ಮೇಲ್ಮನವಿ ಹೋದಾಗಲೂ ಗಲ್ಲು ಖಾಯಂ ಆದಾಗ ಕೊನೆಯ ಪ್ರಯತ್ನ ಎಂದು ರಾಷ್ಟ್ರಪತಿಗೆ ಮನವಿ ಸಲ್ಲಿಸುತ್ತಾನಲ್ಲ ಹಾಗೆ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ವಿಫಲರಾಗಿ ಕೊನೆಯ ಬಾರಿ ನರಸೀಪುರ ಒಂದನ್ನು ಪ್ರಯತ್ನಿಸಿ ನೋಡೋಣ ಎಂದೇ ಅಲ್ಲಿಗೆ ಬರುವ ರೋಗಿಗಳೂ ಇದ್ದರು. ಆದರೆ ಪರಮಾಶ್ಚರ್ಯದ ಸಂಗತಿ ಎಂದರೆ ಪ್ರಾಣದ ಆಸೆ ತೊರೆದೇ ಅಲ್ಲಿಗೆ ಬಂದ ನೂರಾರು ಜನ ಪೂರ್ಣ ಹುಷಾರಾಗಿ ಮನೆಗೆ ಮರಳುತ್ತಿದ್ದರು. ಇಂತಹ ಒಂದೆರಡಲ್ಲ ಹತ್ತಾರೂ ನೂರಾರು ಜೀವಂತ ನಿದರ್ಶನಗಳಿವೆ. ನರಸೀಪುರದ ನಾರಾಯಣ ಮೂರ್ತಿಗಳೆಂದರೆ ಸಾಯಲು ಸಿದ್ಧರಾದ ರೋಗಿಯ ಕಟ್ಟ ಕಡೆಯ ಭರವಸೆಯಾಗಿತ್ತು.
ನರಸೀಪುರದ ನಾರಯಣ ಮೂರ್ತಿಗಳ ಕುಟುಂಬ ಮೂಲತಃ ತಮಿಳು ನಾಡಿನ ಕುಂಬಕೋಣಂನವರು ಎನ್ನುವ ಮಾತಿದೆ. ಅವರು ಸುಮಾರು 800 ವರ್ಷಗಳ ಹಿಂದೆ ಅಲ್ಲಿಂದ ವಲಸೆ ಬಂದವರು ಮತ್ತು ಅವರ ಪೂರ್ವಜರು 450 ವರ್ಷಗಳ ಹಿಂದೆಯೇ ನರಸೀಪುರದಲ್ಲಿ ನೆಲೆ ನಿಂತಿದ್ದರು ಎನ್ನಲಾಗುತ್ತದೆ. ಅವರು ಕದಂಬರ ಕಾಲದ ರಾಜವೈದ್ಯರ ಪರಂಪರೆಯವರು ಅನ್ನುವ ಮಾತುಗಳೂ ಸಹ ಇವೆ. ಸಾಗರದ ಸಿದ್ಧ ಪುರುಷ ಅವಧೂತ ಮಹಿಮ ಪರಮಹಂಸ ಶ್ರೀಧರ ಭಗವಾನ್, ಬಾಲಕನಾಗಿದ್ದ ನಾರಾಯಣ ಮೂರ್ತಿಗಳನ್ನು ಆಶಿರ್ವದಿಸಿ, ಮುಂದೆ ಬಹಳ ದೊಡ್ಡ ಲೋಕವಿಖ್ಯಾತ ವೈದ್ಯನಾಗುತ್ತೀಯಾ ಎಂದು ಭವಿಷ್ಯ ನುಡಿದಿದ್ದರಂತೆ. ಅತ್ಯಂತ ಬಡತನ ಕುಟುಂಬದಲ್ಲಿ ಜನಿಸಿ ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡು ಅಕ್ಕನ ಆಸರೆಯಲ್ಲಿ ಬೆಳೆದು ಕಷ್ಟ ಪಟ್ಟು ಮೇಲೆ ಬಂದವರು ನಾರಾಯಣ ಮೂರ್ತಿ. ಹಾಗಾಗೇ ಅವರಲ್ಲಿ ಅಹಂಕಾರದ ಲೇವಲೇಷವಿರಲಿಲ್ಲ. ತೀರಾ ಸಾಮಾನ್ಯ ಹಳ್ಳಿಗನಂತೆ ಸರಳವಾಗಿ ಬದುಕುತ್ತಿದ್ದರು. ಬಡವರ ಕುರಿತಾದ ಅಪಾರವಾದ ಕರುಣೆ ಅವರಲ್ಲಿತ್ತು. ಮನಸು ಮಾಡಿದ್ದರೆ ನಾರಾಯಣ ಮೂರ್ತಿಯವರು ನರಸೀಪುರದಲ್ಲೇ ದೊಡ್ಡ ಆಸ್ಪತ್ರೆ ಕಟ್ಟಿ ತಾವು ಮಾಡುತ್ತಿದ್ದ ವೈದ್ಯವನ್ನೇ ಹೈಟೆಕ್ ಗೊಳಿಸಬಹುದಿತ್ತು. ಐಶಾರಾಮದ ಬಂಗಲೆಯಲ್ಲಿ ವಾಸಿಸಬಹುದಿತ್ತು. ಇವತ್ತಿನ ಬಹುತೇಕ ವೈದ್ಯಕೀಯ ವ್ಯವಸ್ಥೆಯಂತೆ ಕೋಟಿಗಟ್ಟಲೆ ಹಣ ಮಾಡಿಕೊಳ್ಳಬಹುದಿತ್ತು. ಆದರೆ ಅವರಿಗೆ ಅದ್ಯಾವುದೂ ಬೇಕಿರಲಿಲ್ಲ. ಅವರು ಕೊನೆಯ ತನಕ ಬಡವರ ವೈದ್ಯ ಸಣ್ಣಿ ಡಾಕ್ಟ್ರಾಗಿಯೇ ಉಳಿದರು. ಅವರು ಯಾವ ರೋಗಿಯ ಬಳಿಯೂ ಇಷ್ಟೇ ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದವರಲ್ಲ. ಕೊಟ್ಟರೆ ಕೊಟ್ಟಷ್ಟು ಪಡೆದುಕೊಳ್ಳುತ್ತಿದ್ದರು, ಇಲ್ಲದಿದ್ದರೂ ಉಚಿತವಾಗಿ ಮದ್ದು ನೀಡುತ್ತಿದ್ದರು. ನಿಜಾರ್ಥದಲ್ಲಿ ಅವರು ವೈದ್ಯ ನಾರಾಯಣರೇ. ದೂರದ ಉತ್ತರ ಕರ್ನಾಟಕ ಜಿಲ್ಲೆಗಳ ಅಸಂಖ್ಯ ಜನರು ಇಂದಿಗೂ ನೆನೆಸಿಕೊಳ್ಳುವ ಪ್ರಾತಃಸ್ಮರಣೀಯರು. ಅವರಲ್ಲಿ ಬಂದು ಮದ್ದು ಪಡೆದು ವಾಸಿಯಾದ ಸಾವಿರಾರು ಜನ ಉತ್ತರ ಕರ್ನಾಟಕ ಭಾಗದಲ್ಲಿದ್ದಾರೆ.
ಇತ್ತೀಚೆಗೆ ಅವರ ಮದ್ದು ಪಡೆದುಕೊಳ್ಳಲು ಬರುತ್ತಿದ್ದ ರೋಗಿಗಳ ಸಂಖ್ಯೆ ತೀರಾ ಹೆಚ್ಚಾಗಿತ್ತು. ಗುರುವಾರ ಭಾನುವಾರಗಳಂದು ನರಸೀಪುರದಲ್ಲಿ ಜನಜಾತ್ರೆಯೇ ನೆರೆಯುತ್ತಿತ್ತು. ಕರೋನಾ ಹಾವಳಿ ಮಿತಿಮೀರಿದಾಗ, ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಿದ ನಂತರ ನಾರಾಯಣ ಮೂರ್ತಿಗಳು ಔಷದಿ ಕೊಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಇತ್ತೀಚೆಗೆ ಕರೋನಾಗೂ ಔಷದಿ ಹುಡುಕುತ್ತಿದ್ದೇನೆ ಎಂದಿದ್ದರು. ಇತ್ತೀಚೆಗೆ ನಾನು ಅವರನ್ನು ನೇರವಾಗಿ ಭೇಟಿಯಾಗಿದ್ದು 2 ವರ್ಷದ ಹಿಂದೆ. ನಾನಾಗ ಖಾಸಗಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ವಾಹಿನಿಯಲ್ಲಿ ದೇಸಿ ವೈದ್ಯ ಪದ್ಧತಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮ ಸರಣಿ ಪ್ರಸಾರವಾಗುತ್ತಿತ್ತು. ಆ ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿಗಳ ವೈದ್ಯ ಪದ್ಧತಿಯ ಕುರಿತಾಗಿ ವಿಶೇಷ ಕಾರ್ಯಕ್ರಮ ಮಾಡುವ ಇಚ್ಛೆ ನನಗಿತ್ತು. ಫೋನ್ ಮಾಡಿ ವಿಚಾರಿಸಿದ್ದೆ. ಮನೆಯಲ್ಲೇ ಇದ್ದಿನಿ ಬಾ ಎಂದಿದ್ದರು. ನಾನು ಅವರನ್ನು ಕಾಣಲು ಹೋಗಿದ್ದು ಭಾನುವಾರ. ಅದು ಅವರು ಔಷದಿ ಕೊಡುವ ದಿನವಾದ್ದರಿಂದ ಮನೆಯಲ್ಲಿ ಜನಜಾತ್ರೆ. ಬಹಳ ಹೊತ್ತು ಕಾದ ನಂತರ ಭೇಟಿ ಸಾಧ್ಯವಾಯ್ತು. “ನೀನ್ ನಮ್ಮ ದುಗ್ಗಾಣಿ ಸೀನಣ್ಣನ ಮಗಾ ಅಂತ ಗೇಟಲ್ಲಿ ಹೇಳಬೇಕಿತ್ತು ಒಳಗೆ ಬಿಡ್ತಿದ್ರು” ಅಂದಿದ್ದರು. ನನ್ನ ಅಜ್ಜ ಶ್ರೀನಿವಾಸ ರಾಯರು ಅದೇ ನರಸೀಪುರದಲ್ಲಿ ಕೆಲವು ಕಾಲ ಶಾಲೆಯ ಮಾಸ್ತರಿಕೆ ಮಾಡಿದ್ದರು. ಆಗಿನಿಂದ ಅವರು ಅಜ್ಜನ ಸ್ನೇಹಿತರು. ನನ್ನ ಅಜ್ಜ ಮುಂತಾದವರು ಸೇರಿ ಸ್ಥಾಪಿಸಿದ ತ್ಯಾಗರ್ತಿಯ ಸ್ವಾಮಿ ವಿವೇಕಾನಂದ ಹೈಸ್ಕೂಲ್ ನಲ್ಲಿ ನಾರಾಯಣ ಮೂರ್ತಿಯವರ ಅಣ್ಣ ಎನ್.ಎಸ್ ಮಹಾಬಲಗಿರಿ ರಾವ್ ಅವರು ಗಣಿತದ ಮಾಸ್ಟರ್ ಆಗಿದ್ದರು. ಅಪ್ಪ ಚಿಕ್ಕಪ್ಪ ಎಲ್ಲರಿಗೂ ಅವರೇ ಲೆಕ್ಕದ ಮಾಸ್ಟರ್. ಅವರೀಗ ಸಾಗರದ ಅಗ್ರಹಾರದಲ್ಲಿ ಮನೆ ಮಾಡಿಕೊಂಡಿದ್ದಾರೆ. ಅಜ್ಜನಿಗೆ ಪಾರ್ಶವಾಯು ಹೊಡೆದಾಗ ನಾರಾಯಣ ಮೂರ್ತಿ ಮನೆಗೆ ಬಂದಿದ್ದರಂತೆ. “ನಿಮ್ಮಜ್ಜ ಹಠಮಾರಿ ಕಣಾ, ನಾನು ಅವನಿಗೆ ಎಲ್ ಐ ಸಿ ಪಾಲಿಸಿ ಕೊಟ್ಟಿಲ್ಲ ಅಂತ ಮುನಿಸಿಕಂಡಿದ್ದ” ಎಂದು ಅಜ್ಜನ ಜೊತೆಗಿನ ತಮ್ಮ ಒಡನಾಟದ ನೆನಪಿನ ಬುತ್ತಿ ಬಿಚ್ಚಿದ್ದರು. ಅವತ್ತು ರೋಗಿಗಳ ಸಂಖ್ಯೆ ಹೆಚ್ಚಿದ್ದರೂ ಮದ್ದು ಕೊಡುತ್ತಲೇ ಅರ್ಧ ಗಂಟೆ ಮಾತಾಡಿದ್ದರು. ನಾನು ಟಿವಿಯ ಕಾರ್ಯಕ್ರಮದ ವಿಚಾರ ಪ್ರಸ್ತಾಪಿಸುತ್ತಲೇ ಅಸಮಧಾನಗೊಂಡರು. “ನೀವ್ ಟೀವಿಯವರ ಉಸಾಬರಿಯೇ ಬ್ಯಾಡ ಮಾರಾಯ. ನೀನು ನಮ್ ಸೀನಣ್ಣನ ಮೊಮ್ಮಗ, ಮನೆಗೆ ಬಾ ಚಾ ಕುಡ್ಕೊಂಡು ಹೋಗು, ಆದ್ರೆ ಕ್ಯಾಮರಾ ಮಾತ್ರ ತರಬೇಡ” ಎಂದು ಕಡ್ಡಿ ತುಂಡುಮಾಡಿದ ಹಾಗೆ ಹೇಳಿದ್ದರು. ಅವರ ಅಸಮಧಾನಕ್ಕೆ ಕಾರಣ ಖಾಸಗಿ ವಾಹಿನಿಯ ತನಿಖಾ ಪತ್ರಕರ್ತೆಯೊಬ್ಬಳು ಅವರ ವಿರುದ್ಧ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ್ದಳು.
ಅವರ ವಿರುದ್ಧ ಕಾಡುನಾಶದ ಪ್ರಕರಣ ದಾಖಲಾಗಿತ್ತು. ಕೊನೆಗೆ ನ್ಯಾಯಾಲಯವೇ ಅವರಿಗೆ ಕ್ಲೀನ್ ಚಿಟ್ ಕೊಟ್ಟಿತು ಅದು ಬೇರೆ ವಿಷಯ. ಆದರೆ ಈ ವಿದ್ಯಮಾನಗಳ ನಂತರ ಅವರು ತುಂಬಾ ನೊಂದಿದ್ದರು. ಅವರ ವಿರುದ್ಧ ಸಾಕಷ್ಟು ಪಿತೂರಿ ನಡೆದಿತ್ತು. ಪದೇ ಪದೇ ಮಾನಹಾನಿ ಮಾಡಲಾಯಿತು. ಒಂದು ಹಂತದಲ್ಲಿ ತೀವ್ರವಾಗಿ ಹತಾಷೆಗೊಂಡ ನಾರಾಯಣ ಮೂರ್ತಿಯವರು ನಾನು ಇನ್ನೆಂದೂ ಔಷಧ ಕೊಡುವುದಿಲ್ಲ ಎಂದುಬಿಟ್ಟಿದ್ದರು. ತಮ್ಮ ಕಡೆಯ ದಿನಗಳಲ್ಲಿ ಅವರು ಕೇಳಬಾರದ ಮಾತುಗಳನ್ನು ಕೇಳಿದರು. ಸಾಕಷ್ಟು ನೊಂದಿದ್ದ ಆ ಹಿರಿಯ ಜೀವದ ಹೃದಯ ಕೃಶಕೊಂಡಿತ್ತು; ಮೊನ್ನೆ ಶಾಶ್ವತವಾಗಿ ಕೆಲಸ ಮಾಡುವುದನ್ನೇ ನಿಲ್ಲಿಸಿತು. ನರಸೀಪುರದ ನಾರಾಯಣ ಮೂರ್ತಿ ಎನ್ನುವ ವೈದ್ಯ ವಿಜ್ಞಾನದ ಅಚ್ಚರಿಯ ಲೆಗಸಿ ಕೊನೆಯಾಯಿತು. ಒಂದು ಸುಧೀರ್ಘ ಅಧ್ಯಾಯ ಮುಗಿದಿದೆ. ಅವರ ಪುತ್ರ ರಾಘವೇಂದ್ರರಿಗೂ ಈ ಔಷಧ ಪದ್ಧತಿಯನ್ನು ನಾರಾಯಣ ಮೂರ್ತಿಗಳು ಹೇಳಿಕೊಟ್ಟಿದ್ದಾರೆ. ರಾಘವೇಂದ್ರ ಅಪ್ಪನ ವೈದ್ಯ ಮುಂದುವರೆಸಿಕೊಂಡು ಹೋಗುತ್ತಾರೆ ಅನ್ನುವ ನಂಬಿಕೆ ಅವರ ಆಪ್ತರಲ್ಲಿದೆ. ಉಳಿದ ವಿಚಾರಗಳೇನೇ ಇರಲಿ, ನಾರಾಯಣ ಮೂರ್ತಿ ಅನ್ನುವ ಅಪ್ರತಿಮ ನಿಸ್ವಾರ್ಥ ವೈದ್ಯ ಮನುಕುಲಕ್ಕೆ ಸಲ್ಲಿಸಿದ ಸೇವೆ ಸದಾ ಸ್ಮರಿಸಿಕೊಳ್ಳಬೇಕಾಗಿದೆ.
ವಿಭಾ (ವಿಶ್ವಾಸ್ ಭಾರದ್ವಾಜ್)