ನವದೆಹಲಿ:ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನೆಲೆಸಿದ್ದವರ ಪರವಾಗಿ ರಾಜ್ಯ ಸರ್ಕಾರ ನಿಂತಿರುವುದಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನುಬಾಹಿರವಾಗಿ ಮನೆ ಕಟ್ಟಿಕೊಂಡವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಯಾವ ನಿಯಮಗಳನ್ನು ಅನುಸರಿಸುತ್ತಿದೆ? ಎಂದು ನೇರ ಪ್ರಶ್ನೆ ಹಾಕಿರುವ ಅವರು, ಇದು ಸರ್ಕಾರದ ಓಲೈಕೆ ರಾಜಕಾರಣದ ಪರಮಾವಧಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಡೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.
ಯಾವ ನಿಯಮದಡಿ ಪುನರ್ವಸತಿ?
ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ನಿರ್ಮಾಣವಾಗಿದ್ದ ಮನೆಗಳು ಅಧಿಕೃತವಲ್ಲ, ಅವು ಸರ್ಕಾರಿ ಜಾಗದಲ್ಲಿ ತಲೆ ಎತ್ತಿದ್ದ ಅಕ್ರಮ ಕಟ್ಟಡಗಳು. ಹೀಗಿದ್ದರೂ, ಹೊರ ರಾಜ್ಯದವರು ಅಥವಾ ಹೊರ ದೇಶಗಳಿಂದ ಬಂದವರು ಸರ್ಕಾರಿ ನಿವೇಶನದಲ್ಲಿ ಅಕ್ರಮವಾಗಿ ನೆಲೆಸಿದ್ದರೆ, ಅಂತಹವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಸಂವಿಧಾನದ ಯಾವ ಕಾನೂನಿನಲ್ಲಿ ಅಥವಾ ಸರ್ಕಾರಿ ನಿಯಮಾವಳಿಯಲ್ಲಿ ಹೇಳಲಾಗಿದೆ? ಅಕ್ರಮ ಎಸಗಿದವರಿಗೆ ಸರ್ಕಾರವೇ ಮುಂದೆ ನಿಂತು ಮನೆ ಕಟ್ಟಿಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ.
ಕೇರಳದ ನಾಯಕರ ಟ್ವೀಟ್ಗೆ ಮಣಿದ ಸರ್ಕಾರ
ರಾಜ್ಯದಲ್ಲಿ ಈ ಹಿಂದೆ ಅನೇಕ ಕಡೆ ಬಡವರ ಮನೆಗಳನ್ನು ಒತ್ತುವರಿ ಹೆಸರಿನಲ್ಲಿ ತೆರವುಗೊಳಿಸಲಾಗಿತ್ತು. ಅಂದು ಯಾವುದೇ ನಾಯಕರು ಧ್ವನಿ ಎತ್ತಲಿಲ್ಲ, ಸರ್ಕಾರವೂ ಕನಿಷ್ಠ ಮಾನವೀಯತೆಗೂ ಸ್ಪಂದಿಸಿರಲಿಲ್ಲ. ಆದರೆ, ಕೋಗಿಲು ಲೇಔಟ್ ವಿಚಾರದಲ್ಲಿ ಕೇವಲ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಟ್ವೀಟ್ ಮಾಡಿದರು ಎಂಬ ಒಂದೇ ಕಾರಣಕ್ಕೆ ಸರ್ಕಾರ ತರಾತುರಿಯಲ್ಲಿ ಪುನರ್ವಸತಿ ಕಲ್ಪಿಸಲು ಮುಂದಾಗಿದೆ. ಇದು ನಮ್ಮ ವ್ಯವಸ್ಥೆಯ ಮೇಲೆ ಹೊರರಾಜ್ಯದವರ ಸವಾರಿ ಅಲ್ಲದೇ ಮತ್ತೇನು? ಇದು ಅಕ್ಷರಶಃ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ತಾರತಮ್ಯ ನೀತಿ ಎಂದು ಅವರು ಕಿಡಿಕಾರಿದರು.
ಕುರ್ಚಿ ಉಳಿಸಿಕೊಳ್ಳುವ ತಂತ್ರವೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಇಷ್ಟು ಕೆಳಮಟ್ಟದ ರಾಜಕೀಯಕ್ಕೆ ಇಳಿಯಬಾರದಿತ್ತು. ಪಕ್ಷದ ಹಿತಾಸಕ್ತಿ ಅಥವಾ ಹೈಕಮಾಂಡ್ ನಾಯಕರ ಓಲೈಕೆ ಏನೇ ಇದ್ದರೂ, ಕರ್ನಾಟಕದ ನೆಲ, ಜಲ ಮತ್ತು ಕನ್ನಡಿಗರ ಹಿತಾಸಕ್ತಿಯೇ ಮುಖ್ಯವಾಗಬೇಕು. ಹೊರಗಿನವರ ಒತ್ತಡಕ್ಕೆ ಮಣಿದು ರಾಜ್ಯದ ಸಂಪನ್ಮೂಲವನ್ನು ಅಕ್ರಮವಾಸಿಗಳಿಗೆ ಧಾರೆಯೆರೆಯುವುದು ಸರಿಯಲ್ಲ. ಸರ್ಕಾರಿ ಅಧಿಕಾರಿಗಳು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ್ದು ಕಾನೂನುಬದ್ಧವಾಗಿಯೇ ಇದೆ. ಆದರೆ ಅದನ್ನು ರಾಜಕೀಯ ಲಾಭಕ್ಕಾಗಿ ತಿರುಚಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯವೇಕಿತ್ತು?
ಸರ್ಕಾರಿ ಜಾಗದಲ್ಲಿ ನೂರಾರು ಮನೆಗಳು ತಲೆ ಎತ್ತುವವರೆಗೆ ಅಧಿಕಾರಿಗಳು ಏನು ಮಾಡುತ್ತಿದ್ದರು? ಅಕ್ರಮವಾಗಿ ಕಟ್ಟಡ ನಿರ್ಮಾಣವಾಗುವ ಸಂದರ್ಭದಲ್ಲಿಯೇ ತಡೆಯುವ ಮಾಹಿತಿ ಅಥವಾ ಅಧಿಕಾರ ಅವರಿಗಿರಲಿಲ್ಲವೇ? ಈಗ ತೆರವು ಮಾಡಿದ ನಂತರ ಮೊಸಳೆ ಕಣ್ಣೀರು ಸುರಿಸುವ ಬದಲು, ಅಕ್ರಮ ತಡೆಯುವಲ್ಲಿ ವಿಫಲರಾದ ವ್ಯವಸ್ಥೆಯ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಿಜವಾದ ಅರ್ಹ ಬಡ ಫಲಾನುಭವಿಗಳಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಸೂರು ಕಲ್ಪಿಸಲಿ, ಆದರೆ ಅಕ್ರಮವನ್ನೇ ಸಕ್ರಮವೆಂಬಂತೆ ಬಿಂಬಿಸುವುದು ಬೇಡ ಎಂದು ವಿ.ಸೋಮಣ್ಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.








